ಗೋಮೂತ್ರ ಸೇವನೆಯಿಂದ ಲಿವರ್ ವೈಫಲ್ಯ, ಸಂಧಿವಾತ?
ಆಸ್ಟ್ರೇಲಿಯಾದ ತಜ್ಞ ವೈದ್ಯ ನವನೀತ್ ಧಾಂದ್ ಎಚ್ಚರಿಕೆ

ಹೊಸದಿಲ್ಲಿ, ಜು.20: ಗೋಮೂತ್ರ ಸೇವನೆಯಿಂದ ಲಿವರ್ ವೈಫಲ್ಯ ಹಾಗೂ ಸಂಧಿವಾತದಂಥ ಗಂಭೀರ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತ ಮೂಲದ ಆಸ್ಟ್ರೇಲಿಯಾ ವೈದ್ಯ ಡಾ.ನವನೀತ್ ಧಾಂದ್ ಎಚ್ಚರಿಕೆ ನೀಡಿದ್ದಾರೆ.
ಭಾರತದಲ್ಲಿ ತರಬೇತಿ ಪಡೆದು ಇದೀಗ ಸಿಡ್ನಿ ವಿಶ್ವವಿದ್ಯಾನಿಲಯದ ಪಶುವಿಜ್ಞಾನ ಬಯೊ ಸ್ಟಾಟಿಸ್ಟಿಕ್ಸ್ ಅಂಡ್ ಎಪಿಡೆಮಿಯಾಲಜಿಯ ಸಹಾಯಕ ಪ್ರಾಧ್ಯಾಪಕರಾಗಿರುವ ಅವರು, ಕಚ್ಚಾ, ಸೋಂಕು ತಲುಲಿದ ಹಸುಗಳ ಮೂತ್ರವನ್ನು ಸೇವಿಸಿದರೆ ಕನಿಷ್ಠ ಮೂರು ರೋಗಗಳು ಬರುವುದು ಖಚಿತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಿವರ್ ವೈಫಲ್ಯಕ್ಕೆ ಕಾರಣವಾಗುವ ಲೆಪ್ಟೋಸ್ಪಿರೋಸಿಸ್, ಸಂಧಿವಾತಕ್ಕೆ ಕಾರಣವಾಗುವ ಎಲುಬು ಸಾಂದ್ರತೆ ಕಡಿಮೆಯಾಗುವಿಕೆ ಹಾಗು ನ್ಯೂಮೋನಿಯಾ ಹಾಗೂ ಹೃದ್ರೋಗಕ್ಕೆ ಕಾರಣವಾಗುವ ಕ್ಯೂ ಜ್ವರಕ್ಕೆ ಇದು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಈ ಹೇಳಿಕೆಯಿಂದಾಗಿ ಭಾರತದಲ್ಲಿ ಹೆಚ್ಚುತ್ತಿರುವ ಗೋಮೂತ್ರ ಮಾರಾಟದ ಮೇಲೆ ಯಾವ ಪರಿಣಾಮವನ್ನೂ ಬೀರುವ ಸಾಧ್ಯತೆ ಇಲ್ಲ.
ಆಯುರ್ವೇದವನ್ನು ಪ್ರತಿಪಾದಿಸುವ ಬಹಳಷ್ಟು ಮಂದಿ, ಇದು ಸಮಗ್ರ ಗುಣಪಡಿಸುವ ವ್ಯವಸ್ಥೆಯನ್ನು ಒಳಗೊಂಡಿದ್ದು, ಸಾವಿರಾರು ವರ್ಷಗಳಿಂದ ದೇಶದಲ್ಲಿ ರೂಢಿಯಲ್ಲಿದೆ ಎಂದು ಹೇಳುತ್ತಿದ್ದಾರೆ. ಜತೆಗೆ ಇದರ ಚಿಕಿಕ್ಸಕ ಗುಣ ಹಾಗೂ ಆರೋಗ್ಯ ಪ್ರಯೋಜನಗಳು ಅಧಿಕ ಎನ್ನುವುದು ಇವರ ವಾದ.