ದ.ಕ: ಹೆಚ್ಚುತ್ತಿವೆ ರಸ್ತೆ ಅಪಘಾತಗಳು!
6 ತಿಂಗಳಲ್ಲಿ 530 ಅಪಘಾತ, 104 ಸಾವು!
ಮಂಗಳೂರು,ಜು.20: ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಪ್ರಾಣಹಾನಿ ಪ್ರಕರಣಗಳೂ ಹೆಚ್ಚಾಗುತ್ತಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ರಾವ್ ಬೊರಸೆ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2016ನೆ ಸಾಲಿನ ಆರು ತಿಂಗಳಲ್ಲಿ (ಜನವರಿಯಿಂದ ಜೂನ್ 30ವರೆಗೆ) ಒಟ್ಟು 530 ಅಪಘಾತಗಳಾಗಿವೆ ಎಂದರು.
ಈ ಅಪಘಾತಗಳಲ್ಲಿ 104 ಮಂದಿ ಪ್ರಾಣ ಕಳೆದುಕೊಂಡಿದ್ದು, 759 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ಹೆದ್ದಾರಿಗಳಲ್ಲಿ ಸಂಚಾರ ಸೂಚನಾ ಫಲಕಗಳಿಲ್ಲದಿರುವುದು, ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಸಂಚಾರ ಸುರಕ್ಷಾ ಸಾಧನಗಳನ್ನು ವ್ಯವಸ್ಥೆ ಮಾಡುವ ಮೂಲಕ ಅಪಘಾತ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಜಿಲ್ಲಾಡಳಿತಕ್ಕೆ ಅವರು ಈ ಸಂದರ್ಭ ಮನವಿ ಮಾಡಿದರು.
ಒಂದು ವಾರದಲ್ಲಿ ಸಂಬಂಧಪಟ್ಟ ಇಲಾಖೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಯಾವ ಪ್ರದೇಶಗಳಲ್ಲಿ ಸೂಚನಾ ಫಲಕಗಳು, ಬ್ಯಾರಿಕೇಡ್ ಗಳ ಅಳವಡಿಕೆ ಅಗತ್ಯವಿದೆ ಎಂಬುದರ ಪಟ್ಟಿಯನ್ನು ಒದಗಿಸುವುದಾಗಿ ತಿಳಿಸಿದ ಅವರು, ಅವುಗಳ ಅಳವಡಿಕೆಗೆ ಅಗತ್ಯವಿರುವ ನಿಧಿಯನ್ನು ಸಂಬಂಧಪಟ್ಟ ಇಲಾಖೆಗಳು ಕ್ರೋಢೀಕರಿಸಿಕೊಂಡು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಎಸ್ಪಿ ಭೂಷಣ್ ಗುಲಾಬ್ ರಾವ್ ಬೊರಸೆ ಆಗ್ರಹಿಸಿದರು.
ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳ!
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2011ರಲ್ಲಿ 750 ರಸ್ತೆ ಅಪಘಾತಗಳು ನಡೆದಿದ್ದು, 118 ಮಂದಿ ಮೃತಪಟ್ಟು 1196 ಮಂದಿ ಗಾಯಗೊಂಡಿದ್ದಾರೆ. 2012ರಲ್ಲಿ 828 ರಸ್ತೆ ಅಪಘಾತಗಳಲ್ಲಿ 117 ಮಂದಿ ಮೃತಪಟ್ಟು, 1338 ಮಂದಿ ಗಾಯಗೊಂಡಿದ್ದಾರೆ. 2013ರಲ್ಲಿ 891 ರಸ್ತೆ ಅಪಘಾತಗಳಲ್ಲಿ 147 ಮಂದಿ ಮೃತರಾಗಿ, 1318 ಮಂದಿ ಗಾಯಗೊಂಡಿದ್ದಾರೆ. 2014ರಲ್ಲಿ 957 ಅಪಘಾತಗಳು ನಡೆದಿದ್ದು, 148 ಮಂದಿ ಮೃತಪಟ್ಟು, 1336 ಮಂದಿ ಗಾಯಗೊಂಡಿದ್ದಾರೆ. 2015ರಲ್ಲಿ 959 ರಸ್ತೆ ಅಪಘಾತಗಳು ನಡೆದಿದ್ದು, 169 ಮೃತಪಟ್ಟು, 1271 ಮಂದಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆ ಮಾಹಿತಿ ನೀಡಿದರು.







