ಶಾಲೆಯ ಗೃಹಮಂತ್ರಿಗೆ ರಾಜ್ಯದ ಗೃಹಮಂತ್ರಿಯ ಫೋನ್ !
ರದ್ದಾದ ಶಿಕ್ಷಕರ ವರ್ಗಾವಣೆ

ಪುತ್ತೂರು,ಜು.20: ತನ್ನ ಶಿಕ್ಷಕರ ಪೈಕಿ ನಾಲ್ವರು ಶಿಕ್ಷಕರಿಗೆ ಏಕಕಾಲದಲ್ಲಿ ವರ್ಗಾವಣೆಯಾಗುವುದನ್ನು ತಡೆಯಲು 5ನೆ ತರಗತಿಯ ವಿದ್ಯಾರ್ಥಿಯೊಬ್ಬ ರಾಜ್ಯ ಗೃಹ ಸಚಿವರಿಗೆ ಮೊಬೈಲ್ ಮೂಲಕ ಮೆಸೇಜ್ ಮಾಡಿ, ಅವರ ಕರೆಯನ್ನು ಸ್ವೀಕರಿಸಿ ತನ್ನ ಶಿಕ್ಷಕರನ್ನು ಉಳಿಸಿಕೊಂಡ ವಿಶಿಷ್ಟ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.
ಸರಕಾರಿ ಶಾಲೆಯಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಲು ಕೆಲವು ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ಇಲಾಖೆ ಕ್ರಮ ಕೈಗೊಂಡಿತ್ತು. ಇಲ್ಲಿನ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ನಾಲ್ವರು ಶಿಕ್ಷಕಿಯರನ್ನು ಹೆಚ್ಚುವರಿ ಶಿಕ್ಷಕಿಯರನ್ನಾಗಿ ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆಯಿಂದ ಪಟ್ಟಿ ಮಾಡಲಾಗಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆಯು ಜು.19ರಂದು ಕೌನ್ಸೆಲಿಂಗ್ ನಡೆಸಿತ್ತು. ಈ ಕುರಿತು ನಂದಿಲ ನಿವಾಸಿ ಪ್ರತಿಮಾ ಎಂಬವರ ಪುತ್ರ ಹಾರಾಡಿ ಸರಕಾರಿ ಶಾಲೆಯ 8ನೆ ತರಗತಿ ದಿವಿತ್ ರೈಯವರ ಮೆಸೇಜ್‌ಗೆ ಸ್ಪಂದಿಸಿ ಗೃಹಮಂತ್ರಿ ಡಾ. ಜಿ ಪರಮೇಶ್ವರ್‌ರವರು ಫೋನ್ ಕರೆ ಮಾಡಿ ಸ್ಪಂದಿಸಿದ್ದಾರೆ.
ಮೇಸೆಜ್ ಹೀಗಿತ್ತು:
"ನಾನು ಹಾರಾಡಿ ಶಾಲೆಯ ಗೃಹ ಮಂತ್ರಿ ದಿವಿತ್ ರೈ, ನನಗೆ ನಿಮ್ಮಲ್ಲಿ 5 ನಿಮಿಷ ಮಾತಾಡಲಿಕ್ಕಿತ್ತು"ಎಂದು ತಾಯಿ ಪ್ರತಿಮಾ ಅವರ ಮೊಬೈಲ್‌ನಿಂದ ಮೆಸೇಜ್ ಮಾಡಿದ್ದ. 10 ನಿಮಿಷ ಕಳೆದು ಅದೇ ನಂಬರ್‌ಗೆ ಕರ್ನಾಟಕ ಸರಕಾರದ ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ಕರೆ ಮಾಡಿ ವಿಚಾರಿಸಿದಾಗ "ನಮ್ಮ ಶಾಲೆಯಲ್ಲಿ 432 ಮಕ್ಕಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಒಳ್ಳೆಯ ಶಾಲೆ ಎಂದು ಹೆಸರು ಪಡೆದಿರುವ ಶಾಲೆ ಇಲ್ಲಿ 15 ಶಿಕ್ಷಕರಿದ್ದಾರೆ 13 ತರಗತಿಯಿದೆ. ಆದರೆ ಪ್ರಸ್ತುತ ಹೆಚ್ಚುವರಿಯಾಗಿ ಶಿಕ್ಷಕರನ್ನು ಇಲ್ಲಿಂದ ಬೇರೆ ಕಡೆಗೆ ವರ್ಗಾವಣೆ ಮಾಡುತ್ತಾರೆ. ಇಲಾಖೆಯ ಬೇಜವಾಬ್ದಾರಿಯುತ ನಿರ್ಧಾರದಿಂದ ಶಾಲಾ ಮಕ್ಕಳಾದ ನಮಗೆ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಪ್ರತಿಭಟನೆ ನಡೆಸಿದರೂ ಇಲಾಖೆ ಕ್ಯಾರೇ ಮಾಡಲಿಲ್ಲ" ಎಂದು ದಿವಿತ್ ಗೃಹ ಸಚಿವರಿಗೆ ತಿಳಿಸಿದ.
ಇದಕ್ಕೆ ಸ್ಪಂದಿಸಿದ ಗೃಹ ಸಚಿವರು ಶಿಕ್ಷಣ ಸಚಿವರ ಜೊತೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ಬುಧವಾರ ಮತ್ತೆ ದಿವಿತ್ ಅವರ ತಾಯಿ ಪ್ರತಿಮಾ ಅವರ ಮೊಬೈಲ್‌ಗೆ ಕರೆ ಮಾಡಿದ ಗೃಹ ಸಚಿವರು, ಮಕ್ಕಳ ಕಲಿಕೆಯ ವಿಚಾರದಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಪುತ್ರನಿಗೆ ನೋವಾಗದಂತೆ ಅವನ ಶಿಕ್ಷಕರನ್ನು ಅಲ್ಲಿಯೇ ಉಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರೂ ಪ್ರತಿಮಾ ಅವರ ಮೊಬೈಲ್‌ಗೆ ಕರೆ ಮಾಡಿ, ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ದಿವಿತ್‌ನ ಶಿಕ್ಷಕರನ್ನು ವರ್ಗಾವಣೆ ಮಾಡುವುದಿಲ್ಲ. ಈ ಬಗ್ಗೆ ಆತ ಟೆನ್ಶನ್ ಮಾಡಿಕೊಳ್ಳುವುದು ಬೇಡ. ಆತನ ಗೆಳೆಯರಿಗೂ ಇದನ್ನು ತಿಳಿಸಿ ಅವರೆಲ್ಲರೂ ಶಾಲೆಗೆ ಬರುವಂತೆ ನೋಡಿಕೊಳ್ಳಲಿ ಎಂದು ಹೇಳಿದ್ದಾರೆ ಎಂದು ದಿವಿತ್ ಅವರ ತಾಯಿ ಪ್ರತಿಮಾ ತಿಳಿಸಿದ್ದಾರೆ.







