ಗುಜರಾತ್ ದಲಿತ ದೌರ್ಜನ್ಯ ಪ್ರಕರಣ : 9 ಮಂದಿಯ ಬಂಧನ; ನಾಲ್ವರು ಪೊಲೀಸರ ಅಮಾನತು: ರಾಜನಾಥ್

ಹೊಸದಿಲ್ಲಿ, ಜು.20: ಗುಜರಾತ್‌ನ ಉನಾದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 9 ಮಂದಿಯನ್ನು ಬಂಧಿಸಲಾಗಿದೆ ಹಾಗೂ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆಯೆಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.
ಉನಾ ಹಲ್ಲೆ ಪ್ರಕರಣದ ಕುರಿತು ಸದನದಲ್ಲಿ ಹೇಳೀಕೆ ನೀಡಿದ ಅವರು, ‘‘ದಲಿತರ ವಿರುದ್ಧ ದೌರ್ಜನ್ಯವು ಸಾಮಾಜಿಕ ಪಿಡುಗಾಗಿದೆ. ನಾವದನ್ನು ಸವಾಲಾಗಿ ಸ್ವೀಕರಿಸಬೇಕು. ಇದರ ವಿರುದ್ಧ ಹೋರಾಡಲು ಎಲ್ಲ ಪಕ್ಷಗಳು ಒಟ್ಟಾಗಬೇಕೆಂದು ನಾನು ಒತ್ತಾಯಿಸುತ್ತಿದ್ದೇನೆ’’ ಎಂದರು.
ಘಟನೆಯ ಕುರಿತು ತಿಳಿದೊಡನೆಯೇ ಪ್ರಧಾನಿ ನರೇಂದ್ರ ಮೋದಿ ಅವನ್ನು ಖಂಡಿಸಿದ್ದಾರೆಂದು ರಾಜನಾಥ್ ತಿಳಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗುಜರಾತ್‌ನಲ್ಲಿ ದಲಿತರ ಮೇಲೆ ದಾಳಿಗಳು ತೀವ್ರವಾಗಿ ಕಡಿಮೆಯಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಆಡಳಿತ ಕಾಲದಲ್ಲಿ ದಲಿತ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಭಾರೀ ಹೆಚ್ಚಿದ್ದವೆಂದು ಅವರು ಹೇಳಿದರು.
ವಿಪಕ್ಷದಿಂದ ರಾಜ್ಯಸಭೆ ಭಂಗ
ಗುಜರಾತ್‌ನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು, ಮಂಗಳವಾರ ಬೆಳಗಿನ ಕಲಾಪವನ್ನು 2 ಬಾರಿ ಬಲವಂತವಾಗಿ ಮುಂದೂಡುವಂತೆ ಮಾಡಿದವು.
ಈ ವಿಷಯವನ್ನು ಪ್ರಬಲವಾಗಿ ಪ್ರಸ್ತಾವಿಸುವ ವಿಷಯದಲ್ಲಿ ಕಾಂಗ್ರೆಸ್, ಬಿಎಸ್ಪಿ ಹಾಗೂ ಟಿಎಂಸಿ ಪರಸ್ಪರ ಮೇಲಾಟನಡೆಸಿದವು. ಇದರಿಂದಾಗಿ ಸದನದಲ್ಲಿ ಕೋಲಾಹಲ ಉಂಟಾಗಿ ಒಮ್ಮೆ 10 ನಿಮಿಷ ಹಾಗೂ ಇನ್ನೊಮ್ಮೆ ಮಧ್ಯಾಹ್ನದವರೆಗೆ 30 ನಿಮಿಷ ಸದನವನ್ನು ಮುಂದೂಡಬೇಕಾಗಿ ಬಂತು.
ಕಲಾಪ ಪಟ್ಟಿಯನ್ನು ಸಭಾಧ್ಯಕ್ಷರ ಮುಂದಿಡುತ್ತಿದ್ದಂತೆಯೇ, ವಿಷಯ ಪ್ರಸ್ತಾಪಿಸಲು ಎದ್ದುನಿಂತ ಟಿಎಂಸಿಯ ಡೆರೆಕ್ ಒ’ಬ್ರಿಯಾನ್, ಗುಜರಾತ್‌ನಲ್ಲಿ ದಲಿತರನ್ನು ದಮನಿಸಲಾಗುತ್ತಿದೆ. ಆದರೆ, ಅದು ಇಲ್ಲಿ ಚರ್ಚೆಯಾಗುತ್ತಿಲ್ಲ ಎಂದರು. ಅವರನ್ನು ಇತರ ಸದಸ್ಯರು ಬೆಂಬಲಿಸಿದರು.





