ಪ್ರಧಾನ ಮಂತ್ರಿ ಕೃಷಿ ಸಂಚಯ ಯೋಜನೆಯಡಿ ಜಿಲ್ಲಾ ನೀರಾವರಿ ಯೋಜನೆ: ಎ.ಬಿ.ಇಬ್ರಾಹೀಂ

ಮಂಗಳೂರು, ಜು.20; ಪ್ರಧಾನ ಮಂತ್ರಿ ಕೃಷಿ ಸಂಚಯ ಯೋಜನೆಯಡಿ ಜಿಲ್ಲಾ ನೀರಾವರಿ ಯೋಜನೆ ರೂಪಿಸಲು ಎಲ್ಲಾ ಸಾಧ್ಯತೆಗಳನ್ನು ತೆಗೆದುಕೊಂಡು ಯೋಜನಾ ವರದಿ ಸಿದ್ದಪಡಿಸುವಂತೆ ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸೂಚಿಸಿದರು.
ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಪ್ರಧಾನಮಂತ್ರಿ ಕೃಷಿ ಸಂಚಯ ಯೋಜನೆಯಡಿ ಜಿಲ್ಲಾ ನೀರಾವರಿ ಯೋಜನೆಗೆ ಸಂಬಂಧಿಸಿ ರೈತ ಸಂಘಟನೆಗಳ ಮುಖಂಡರು ಮತ್ತು ಎನ್‌ಜಿಒ ಸಂಸ್ಥೆಗಳ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವರ್ಷದಲ್ಲಿ ಕಾಣಿಸಿಕೊಂಡ ಬರದ ಹಿನ್ನೆಲೆಯಲ್ಲಿ ಮತ್ತು ಪ್ರತೀ ತಾಲೂಕಿನಲ್ಲಿ ಕಾಣಿಸಿಕೊಂಡ ನೀರಿನ ಕೊರತೆಯ ಹಿನ್ನೆಲೆಯಲ್ಲಿ ಮುಂದೆ ಬರದ ಸಮಸ್ಯೆ ಬಾರದಂತೆ ತಡೆಯುವ ನಿಟ್ಟಿನಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು . ಇದಕ್ಕಾಗಿ ದೀರ್ಘಕಾಲೀನ ನೀರಾವರಿ ಯೋಜನೆಯನ್ನು ರೂಪಿಸಬೇಕಾಗಿದೆ ಎಂದು ಹೇಳಿದರು.
ಬೆಂಗಳೂರು ಹೊರತುಪಡಿಸಿ ಅಧಿಕ ಕೈಗಾರಿಕೆ ಇರುವ ಜಿಲ್ಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿದ ಜಿಲ್ಲೆಗಳಿಗಿಂತ ಜಾಸ್ತಿ ನದಿ, ಉಪನದಿಗಳಿವೆ. ನಾಲ್ಕು ತಿಂಗಳು ಸುರಿಯುವ ಮಳೆಯನ್ನು ಮುಂದಿನ 8 ತಿಂಗಳಿಗೆ ಉಪಯೋಗಿಸಬೇಕಾದ ಯೋಜನೆಯನ್ನು ರೂಪಿಸಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಮಾತನಾಡಿ, ಪ್ರಧಾನಮಂತ್ರಿ ಕೃಷಿ ಸಂಚಯ ಯೋಜನೆಯಡಿ ಜಿಲ್ಲಾ ನೀರಾವರಿ ಯೋಜನೆ ರೂಪಿಸಲು ರೈತಸಂಘಟನೆಗಳ ಮುಖಂಡರು ಮತ್ತು ಎನ್‌ಜಿಒ ಸಂಸ್ಥೆಗಳ ಸಭೆಯಲ್ಲಿ ಅಭಿಪ್ರಾಯವನ್ನು ಪಡೆದು ಈ ತಿಂಗಳ ಅಂತ್ಯಕ್ಕೆ ರಾಜ್ಯ ಸರಕಾರಕ್ಕೆ ಯೋಜನಾ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ದ.ಕ. ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಶಾಸಕ ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.







