ದುರ್ಗಮ ಪ್ರದೇಶಗಳಲ್ಲಿ ಬೆಳಕು ಆಧಾರಿತ ಇಂಟರ್‌ನೆಟ್
ಫೇಸ್‌ಬುಕ್ ವಿಜ್ಞಾನಿಗಳ ಮಹತ್ವದ ಸಂಶೋಧನೆ

ವಾಶಿಂಗ್ಟನ್, ಜು. 20: ಸಾಮಾಜಿಕ ಜಾಲ ತಾಣ ಫೇಸ್‌ಬುಕ್‌ನ ಕನೆಕ್ಟಿವಿಟಿ ಲ್ಯಾಬ್‌ನಲ್ಲಿ ಕೆಲಸ ಮಾಡುವ ವಿಜ್ಞಾನಿಗಳು, ಗಾಳಿಯ ಮೂಲಕ ಸಂಚರಿಸುವ ಬೆಳಕಿನ ಸಂಕೇತಗಳನ್ನು ಪತ್ತೆಹಚ್ಚಲು ನೂತನ ವಿಧಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಂಶೋಧನೆ ದುರ್ಗಮ ಪ್ರದೇಶಗಳಿಗೆ ಇಂಟರ್‌ನೆಟ್ ಸೇವೆ ನೀಡುವ ಸಾಮರ್ಥ್ಯ ಹೊಂದಿರುವ ‘ಫಾಸ್ಟ್ ಆಪ್ಟಿಕಲ್ ವಯರ್‌ಲೆಸ್ ನೆಟ್‌ವರ್ಕ್’ಗಳ ಸ್ಥಾಪನೆಗೆ ನೆರವಾಗಲಿದೆ.
ಇಂದಿನ ಅತಿ ವೇಗದ ತಂತಿ ಆಧಾರಿತ ಸಂಪರ್ಕ ಜಾಲಗಳು ಆಪ್ಟಿಕಲ್ ಫೈಬರ್‌ಗಳಲ್ಲಿ ಮಾಹಿತಿಯನ್ನು ಸಾಗಿಸಲು ಲೇಸರ್‌ಗಳನ್ನು ಬಳಸುತ್ತವೆ. ಆದರೆ, ವಯರ್‌ಲೆಸ್ ಜಾಲಗಳು ರೇಡಿಯೊ ತರಂಗಗಳು ಅಥವಾ ಮೈಕ್ರೋವೇವ್‌ಗಳನ್ನು ಅವಲಂಬಿಸುತ್ತವೆ.
‘‘ಹೆಚ್ಚಿನ ಜನರು ಇಂಟರ್‌ನೆಟ್ ಸಂಪರ್ಕ ಹೊಂದಿಲ್ಲ. ಯಾಕೆಂದರೆ, ಅವರ ಪೈಕಿ ಹೆಚ್ಚಿನವರು ಜಗತ್ತಿನ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರು ವಾಸಿಸುವ ಸ್ಥಳಗಳಲ್ಲಿ ವಯರ್‌ಲೆಸ್ ಸಂಪರ್ಕಗಳು ಲಭ್ಯವಿಲ್ಲ’’ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿರುವ ಟೊಬಿಯಸ್ ಟೈಕ್ ಹೇಳುತ್ತಾರೆ.
ಮಿತ ದರದಲ್ಲಿ ಆಪ್ಟಿಕಲ್ ಫೈಬರ್ ಮತ್ತು ಸೆಲ್ ಟವರ್‌ಗಳನ್ನು ಸ್ಥಾಪಿಸುವುದು ಸಾಧ್ಯವಿಲ್ಲದ ಸ್ಥಳಗಳಿಗೆ ಬೆಳಕು ಆಧಾರಿತ ವಯರ್‌ಲೆಸ್ ಸಂಪರ್ಕ ಅಥವಾ ಫ್ರೀ-ಸ್ಪೇಸ್ ಆಪ್ಟಿಕಲ್ ಕಮ್ಯುನಿಕೇಶನ್ಸ್ ಮೂಲಕ ಇಂಟರ್‌ನೆಟ್ ಒದಗಿಸಬಹುದಾಗಿದೆ.







