ಮತ್ತೆ ನಿಶಬ್ಧಗೊಂಡ ಕಲ್ಲಡ್ಕ : ಅಂಗಡಿ ಮುಂಗಟ್ಟು ಬಂದ್
ಬಿಗಿ ಪೊಲೀಸ್ ಬಂದೋಬಸ್ತ್
ಬಂಟ್ವಾಳ, ಜು. 20: ಎರಡು ಕೋಮಿನ ಯುವಕರ ನಡುವೆ ಬುಧವಾರ ಸಂಜೆ ನಡೆದಿದೆನ್ನಲಾದ ಅಹಿತಕರ ಘಟನೆಯೊಂದರ ಬಳಿಕ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಮತ್ತೆ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ರಾತ್ರಿಯಾಗುತ್ತಿದ್ದಂತೆ ಕಲ್ಲಡ್ಕ ಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿ ಮನೆಗೆ ತೆರಳಿದರು.
ಇಂದು ಸಂಜೆ ವೇಳೆಗೆ ಒಂದು ಕೋಮಿಗೆ ಸೇರಿದ ಯುವಕರ ಗುಂಪೊಂದು ಕಲ್ಲಡ್ಕದ ಪಂಚವತಿ ಸಂಕೀರ್ಣ ಕಟ್ಟಡದಲ್ಲಿ ನಿಂತು ಸಿಟಿ ಫ್ಲಾಝಾ ಕಟ್ಟದಲ್ಲಿದ್ದ ಇನ್ನೊಂದು ಕೋಮಿನ ಯುವಕರನ್ನು ನಿಂದಿಸುವ ಮೂಲಕ ಕೆರಳಿಸಿದ್ದಾರೆ ಎನ್ನಲಾಗಿದ್ದು ಈ ಘಟನೆಯ ಬಳಿಕ ಕಲ್ಲಡ್ಕ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ, ಬಂಟ್ವಾಳ ನಗರ ಠಾಣೆ ಎಸ್ಸೈ ನಂದಕುಮಾರ್ ಹಾಗೂ ಅವರ ಸಿಬ್ಬಂದಿ ಕಲ್ಲಡ್ಕದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ. ಕರ್ತವ್ಯ ನಿರತ ಪೊಲೀಸರು ಜನರು ಗುಂಪು ಸೇರದಂತೆ ಎಚ್ಚರಿಕೆ ನೀಡಿ ಪರಿಸ್ಥಿತಿ ಹತೋಟಿಗೆ ತಂದರು ಎಂದು ತಿಳಿದು ಬಂದಿದೆ.
ಪರಿಸರದಲ್ಲಿ ಆತಂಕದ ವಾತಾವರಣ ಮನೆ ಮಾಡಿದ್ದ ಹಿನ್ನೆಲೆಯಲ್ಲಿ ಕಲ್ಲಡ್ಕ ಹಾಗೂ ಸುತ್ತ ಮುತ್ತಲಿನ ಪ್ರದೇಶದ ಕೆಲವು ಅಂಗಡಿ, ಹೊಟೇಲ್ ಸಹಿತ ವ್ಯವಹಾರ ಕೇಂದ್ರದ ಮಾಲಕರು ಸ್ವತಃ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮನೆಗೆ ತೆರಳಿದರು. ಬಂದ್ ಮಾಡದೇ ಇದ್ದ ಕೆಲವು ಅಂಗಡಿಗಳನ್ನು ಭದ್ರತೆಗೆ ನಿಯೋಜಿತರಾದ ಪೊಲೀಸರು ಬಾಗಿಲು ಮುಚ್ಚಿಸಿದ್ದಾರೆ ಎನ್ನಲಾಗಿದೆ.
ವ್ಯವಹಾರ ಕೇಂದ್ರಗಳು ಬಂದ್ ಆಗಿರುವುದರಿಂದ ಸದಾ ಜನರಿಂದ ಗಿಜುಗುಡುತ್ತಿದ್ದ ಕಲ್ಲಡ್ಕ ಪೇಟೆ ಸಂಪೂರ್ಣ ನಿಶಬ್ದಗೊಂಡಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಗಳು ಹಾಗೂ ಇತರ ವಾಹನಗಳು ಎಂದಿನಂತೆ ಸಂಚರಿಸುತ್ತಿದ್ದರೂ ಕಲ್ಲಡ್ಕ ವಿಟ್ಲ ಹಾಗೂ ಇತರ ಒಳ ರಸ್ತೆಯಲ್ಲಿ ಖಾಸಗಿ ವಾಹನಗಳ ಹಾಗೂ ಸಾರ್ವಜನಿಕರ ಸಂಚಾರ ವಿರಳವಾಗಿದೆ.
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಲ್ಲಡ್ಕ ಪೇಟೆ ಸಹಿತ ಸುತ್ತ ಮುತ್ತಲಿನ ಆಯಾ ಕಟ್ಟಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದ್ದು, ಪೊಲೀಸ್ ಅಧಿಕಾರಿಗಳು ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸುವ ನಿರೀಕ್ಷೆ ಇದೆ.







