ವೈಜ್ಞಾನಿಕ ರಂಗಕ್ಕೆ ಪ್ರತಿಭಾನ್ವಿತರು ಕಾಲಿಡಬೇಕು ವಿಜ್ಞಾನ ಸಂಶೋಧಕ ಪ್ರೊ. ರಮಣ ಆತ್ರೇಯ
ಇಂಟರ್ನ್ ಶಿಪ್ ಕಾರ್ಯಾಗಾರಕ್ಕೆ ಚಾಲನೆ
ಶಿವಮೊಗ್ಗ, ಜು. 20: ವೈಜ್ಞಾನಿಕ ರಂಗಕ್ಕೆ ಪ್ರತಿಭಾನ್ವಿತ ಯುವ ಪೀಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಲಿಡಬೇಕು. ಈ ಮೂಲಕ ದೇಶದ ವೈಜ್ಞಾನಿಕ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಪುಣೆಯ ಭಾರತೀಯ ವಿಜ್ಞಾನ ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಯ ಪ್ರೊ. ರಮಣ ಆತ್ರೇಯ ಕರೆ ನೀಡಿದ್ದಾರೆ.
ಬುಧವಾರ ನಗರದ ಹೊರವಲಯ ಜೆಎನ್‌ಎನ್‌ಸಿಇ ಕಾಲೇಜು ಸಭಾಂಗಣದಲ್ಲಿ ಆರಂಭಗೊಂಡ 5 ದಿನಗಳ ಇನ್ಸ್‌ಪೈರ್ ಇಂಟರ್ನ್ ಶಿಪ್ ಕಾರ್ಯಾಗಾರಕ್ಕೆ ಚಾಲನೆ ನೀಡಿ ಬಳಿಕ ನಡೆದ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸಂಶೋಧನ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದ ಡಆದ್ಯತೆ ಸಿಗಬೇಕಾಗಿದೆ. ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿಯಲ್ಲಿ ಜ್ಞಾನ ಶಕ್ತಿ ಬಹಳ ಪ್ರಮುಖ ಪಾತ್ರ ವಹಿಸಲಿರುವುದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ದೇಶದ ವಿಜ್ಞಾನ ರಂಗವನ್ನು ಉಜ್ವಲಗೊಳಿಸಲು ಯುವಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ದೇಶದ ಪ್ರತಿಭಾನ್ವಿತ ಯುವ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆಗಳಲ್ಲಿ ಆಸಕ್ತಿ ಮೂಡಿಸುವುದು ಮತ್ತು ಪ್ರತಿಭಾನ್ವಿತರನ್ನು ಗುರುತಿಸುವುದು ಹಾಗೂ ಅವರಿಗೆ ಉತ್ತೇಜನ ನೀಡುವುದು ಅಗತ್ಯವಾಗಿದೆ. ಪದವಿ ಮತ್ತು ಉನ್ನತ ಶಿಕ್ಷಣ ಹಂತದಲ್ಲಿ ವಿಜ್ಞಾನಕ್ಕೆ ಆದ್ಯತೆ ನೀಡಿದರೆ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಹೆಚ್ಚಿನ ಆಸಕ್ತಿಗಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿದ್ದ ಎನ್‌ಇಎಸ್ ವಿದ್ಯಾಸಂಸ್ಥೆಯ ಖಜಾಂಚಿ ವಿಜಯಕುಮಾರ್ ದಿನಕರ್ ಮಾತನಾಡಿ, ಇತಿಹಾಸದ ಕಾಲದಲ್ಲಿ ಭಾರತ ವಜ್ರ-ವೈಢೂರ್ಯ, ಸಂಬಾರ್ ಪದಾರ್ಥಗಳಿಗೆ ಪ್ರಸಿದ್ಧಿ ಪಡೆದಿತ್ತು. ಆದರೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ಮಾಹಿತಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ದೇಶದ ಹೆಸರು ವಿಶ್ವವ್ಯಾಪಿಯಾಗಿದೆ ಎಂದರು.
ವಿದೇಶಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಇಂಜಿನಿಯರ್‌ಗಳಲ್ಲಿ ಶೇ. 25 ಕ್ಕೂ ಅಧಿಕ ಪ್ರಮಾಣದಲ್ಲಿ ಭಾರತೀಯರಿದ್ದಾರೆ. ಆದ್ದರಿಂದ ಇಂದಿನ ಯುವ ಪೀಳಿಗೆ ದೇಶದ ಅಮೂಲ್ಯ ಸಂಪತ್ತು ಎಂದು ನುಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಪ್ರೊ. ಎಚ್.ಆರ್. ಮಹಾದೇವಸ್ವಾಮಿ, ಇಂದಿನ ವಿಜ್ಞಾನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿಜ್ಞಾನ ಅಧ್ಯಯನ ಅವಶ್ಯವಾಗಿದೆ. ವಿದ್ಯಾರ್ಥಿಗಳು ಸಂಶೋಧನೆ ಮತ್ತು ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಾಮಾನ್ಯ ವಿಜ್ಞಾನ ಕಲಿಕೆಗೆ ಮುಂದಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಕಾರ್ಯಾಗಾರದ ಸಂಯೋಜಕ ಪ್ರೊ.ಎಲ್.ಕೆ. ಶ್ರೀಪತಿ ಮಾತನಾಡಿದರು. ಪ್ರೊ. ಎಚ್.ವಿ.ಸುರೇಶ್ ಸ್ವಾಗತಿಸಿದರು.







