ನೀರಿನ ಮಿತ ಬಳಕೆ: ರೈತರಿಗೆ ಕರೆ
ಕಡೂರು: ಕೃಷಿ ವಿಚಾರ ಸಂಕಿರಣ

ಕಡೂರು, ಜು.20: ರೈತರು ಕಡಿಮೆ ನೀರು ಬಳಸಿ ವೈಜ್ಞಾನಿಕ ಮಾದರಿಯಲ್ಲಿ ಕೃಷಿ ಕೈಗೊಳ್ಳುವಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಕರುಣಾಕರ ಆಚಾರ್ಯ ಕರೆ ನೀಡಿದ್ದಾರೆ.
ಅವರು ತಾಲೂಕಿನ ದೊಡ್ಡಬುಕ್ಕಸಾಗರ ಆಂಜ ನೇಯ ವಠಾರದಲ್ಲಿ ಏರ್ಪಡಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ದೊಡ್ಡ ಬುಕ್ಕಸಾಗರ ಇವರ ಸಂಯು ಕ್ತಾಶ್ರಯದಲ್ಲಿ ನಡೆದ ಕೃಷಿ ವಿಚಾರ ಸಂಕಿರಣದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾದರಿ ಕೃಷಿಯ ಜೊತೆಗೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೃಷಿ ವಿಸ್ತರಣೆ ಯೋಜನೆಯಡಿ ಹೊಸದಾಗಿ ಬಾಳೆಗಿಡ ನಾಟಿ, ಮಾವು, ತೆಂಗು, ಸಪೋಟ ಹಾಗೂ ಸಾಂಬಾರು ಬೆಳೆಗಳನ್ನು(ಏಲಕ್ಕಿ, ಲವಂಗ, ಕಾಳುಮೆಣಸು, ಜಾಯಿಕಾಯಿ) ಅಳವಡಿಸುವ ಸದಸ್ಯರಿಗೆ ಅನುದಾನವನ್ನು ನಿಗದಿಪಡಿಸಿದ್ದು ಪ್ರಗತಿಬಂಧು ಸಂಘದ ಸದಸ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮೂಡಿಗೆರೆ ಕೆ.ವಿ.ಕೆ.ಕಾಲೇಜಿನ ಕೃಷಿ ತಜ್ಞ ಆರ್. ಗಿರೀಶ್ ತೋಟಗಾರಿಕೆ ಬೆಳೆಗಳಲ್ಲಿ ಮಿಶ್ರ ಬೆಳೆಗಳ ಮಹತ್ವ ಹಾಗೂ ರೋಗ ಕೀಟಗಳ ಹತೋಟಿ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಜೊತೆಗೆ ಸ್ಥಳೀಯ ಬೆಳೆಗಳ ಸಮಸ್ಯೆಗಳ ಬಗ್ಗೆ ರೈತರೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮವನ್ನು ಬಿಸಲೇಹಳ್ಳಿ ಗ್ರಾಪಂ ಅಧ್ಯಕ್ಷೆ ಬಿ.ಲಾವಣ್ಯಾ ನಾಗರಾಜ್ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಸೆಲ್ಕೋ ಸಂಸ್ಥೆಯ ಪ್ರಬಂಧಕ ಹನುಮಂತಪ್ಪ, ಗ್ರಾಪಂ ಮಾಜಿ ಸದಸ್ಯಸತೀಶ್, ಒಕ್ಕೂಟದ ಅಧ್ಯಕ್ಷ ಪಿ.ಎಲ್.ಕುಮಾರ್, ದೇವರಾಜ್, ಶಾಲಾ ಮುಖ್ಯೋಪಾಧ್ಯಾಯ ಮಹೇಶ್ವರಯ್ಯ ಉಪಸ್ಥಿತರಿದ್ದರು.
ವಸಂತ ನಿರೂಪಿಸಿ, ವಿನೋದ್ ಕುಮಾರ್ ಸ್ವಾಗತಿಸಿ, ಸೇವಾ ಪ್ರತಿನಿಧಿ ಮಂಜುನಾಥ್ ವಂದಿಸಿದರು.







