ಮತದಾನದ ದುರುಪಯೋಗದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲ : ಎನ್.ಗೋಪಾಲಸ್ವಾಮಿ

ಮಂಗಳೂರು, ಜು.20: ಸ್ವಾತಂತ್ರಾನಂತರ ಭಾರತದಲ್ಲಿ ಪ್ರಜೆಗಳಿಗೆ ನೀಡಲಾಗಿರುವ ಸಾರ್ವತ್ರಿಕ ಮತದಾನದ ಹಕ್ಕು ಹಣಬಲದಿಂದ, ಉಚಿತ ಕೊಡುಗೆಗಳ ಆಮಿಷಗಳಿಂದ ದುರುಪಯೋಗಗೊಳ್ಳುತ್ತಿದೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲ ಸ್ವಾಮಿ ತಿಳಿಸಿದರು.
ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿಗಳ ಸಂಘಟನೆ, ಬಾಲಸುಬ್ರಹ್ಮಣ್ಯ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ 51ನೆ ಉಪನ್ಯಾಸ ಸರಣಿಯ ಅಂಗವಾಗಿ ‘ಸಬ್ಸಿಡಿ, ಉಚಿತ ಕೊಡುಗೆ, ಓಟಿಗಾಗಿ ಕಾಸು ವ್ಯವಸ್ಥೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ?’ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು. 1950ರಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾದ ಬಳಿಕ ದೇಶದ ಸಾಕ್ಷರತಾ ಪ್ರಮಾಣದಲ್ಲಿ ಶೇ.15ರಷ್ಟು ಪುರುಷರು, ಶೇ.7ರಷ್ಟು ಮಹಿಳೆಯರು ಅಕ್ಷರಸ್ಥರಾಗಿದ್ದರೂ ಎಲ್ಲರಿಗೂ ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಸಾರ್ವತ್ರಿಕ ಮತದಾನದ ಹಕ್ಕನ್ನು ನೀಡಲಾಯಿತು. ಆದರೆ 65 ವರ್ಷಗಳ ಬಳಿಕ ಪರಿಸ್ಥಿತಿ ಬದಲಾಗಿದೆ. ಕ್ರಿಮಿನಲ್ ಆರೋಪ ಹೊಂದಿರುವವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ. ಓಟಿಗಾಗಿ ವಿವಿಧ ರೀತಿಯ ತಂತ್ರಗಾರಿಕೆಯನ್ನು ನಡೆಸಲಾಗುತ್ತಿದೆ. ಈ ಪೈಕಿ ಚುನಾವಣೆಯ ಸಂದರ್ಭ ನೀಡಲಾಗುತ್ತಿರುವ ಉಚಿತ ಉಡುಗೊರೆಗಳು, ಸರಕಾರದ ಮೂಲಕ ನೀಡಲಾಗುವ ಸಬ್ಸಿಡಿ ಕೊಡುಗೆಗಳು ಚುನಾವಣಾ ಆಯ್ಕೆ ಪ್ರಕ್ರಿಯೆಯನ್ನು ಹಣ, ಕೊಡುಗೆಗಳ ಆಧಾರದಲ್ಲಿ ನಿರ್ಣಯಿಸುವಂತೆ ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಗೋಪಾಲಸ್ವಾಮಿ ತಿಳಿಸಿದರು.
ಕೆಲವು ವರ್ಷಗಳ ಹಿಂದೆ ಸೀರೆ, ಸಣ್ಣಪುಟ್ಟ ಉಡುಗೊರೆಗಳ ಮೂಲಕ ಆರಂಭಗೊಂಡ ಆಮಿಷಗಳು ಇದೀಗ ಟಿ.ವಿ., ಫ್ಯಾನ್, ಮಿಕ್ಸರ್ ಗ್ರೈಂಡರ್, ಮಂಗಳ ಸೂತ್ರದವರೆಗೂ ತಲುಪಿದೆ. ದೇವರ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿಸಿ ಓಟು ಹಾಕಿಸಿಕೊಳ್ಳುವುದು, ಮಾಧ್ಯಮಗಳಲ್ಲೂ ಕಾಸಿಗಾಗಿ ಸುದ್ದಿ ಪ್ರಕಟಿಸುವ ವಿಚಾರ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲೂ ದೂರು ನೀಡುವವರೆಗೂ ಮುಂದುವರಿಯಿತು. ಇತ್ತೀಚಿನ ದಿನಗಳಲ್ಲಿ ಕೆಲವು ಮತದಾರರೂ ಈ ರೀತಿಯ ಪಿಡುಗಿನ ಜೊತೆ ಕೈ ಜೋಡಿಸಿರುವುದನ್ನು ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ನಡೆದ ಚುನಾವಣೆಗಳಲ್ಲಿ ಗಮನಿಸಬಹುದು. ಯಾವ ಪಕ್ಷದವನಾದರೂ ಹಣ ನೀಡಬೇಕು ಎನ್ನುವ ಬೇಡಿಕೆ ಒಡ್ಡುತ್ತಿರುವುದು ಬದಲಾಗುತ್ತಿರುವ ಜನರ ಮನೋಭಾವವನ್ನು ತೋರಿಸುತ್ತಿದೆ. ಈ ರೀತಿಯ ಮನೋಭಾವದಿಂದ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ರೂಪುಗೊಳ್ಳಲು ಸಾಧ್ಯವಿಲ್ಲ.ಅಭಿವೃದ್ಧಿಯ ದೃಷ್ಟಿಯನ್ನು ಮರೆತು ಓಟಿಗಾಗಿ ಸರಕಾರದ ಯೋಜನೆಗಳನ್ನು ಉಚಿತ ಉಡುಗೊರೆ ರೂಪದಲ್ಲಿ ನೀಡತೊಡಗಿದರೆ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿದಂತಾಗುತ್ತದೆ ಎಂದು ಗೋಪಾಲಸ್ವಾಮಿ ತಿಳಿಸಿದರು.
ಭಾರತದ ಚುನಾವಣಾ ಆಯೋಗ ಆರು ದಶಗಳಿಂದ ತನ್ನ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಮತಗಟ್ಟೆಗಳ ಅಕ್ರಮಗಳನ್ನು ತಡೆದು ನಿರ್ಭೀತ ಮತಚಲಾವಣೆಗೆ ಅವಕಾಶ ಮಾಡಿಕೊಡುತ್ತಿದೆ. 2014ರಲ್ಲಿ 8 ಲಕ್ಷ ಮತಗಟ್ಟೆಗಳಲ್ಲಿ 14 ಲಕ್ಷ ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಿಕೊಳ್ಳಲಾಗಿದೆ. ಅರುಣಾಚಲ ಪ್ರದೇಶದಲ್ಲಿ ಮೂರು ಜನರಿಗೆ, ಗುಜರಾತಿನ ಗೀರ್ ಅರಣ್ಯ ಪ್ರದೇಶದಲ್ಲಿ ಒಬ್ಬ ಮತದಾರನಿಗಾಗಿ ಒಂದು ಮತಗಟ್ಟೆಯನ್ನು ಸ್ಥಾಪಿಸಿದೆ. ಇತ್ತೀಚಿನ ಚುನಾವಣೆಗಳನ್ನು ಗಮನಿಸಿದಾಗ ನಗರ ಪ್ರದೇಶದವರಿಗಿಂತ ಗ್ರಾಮೀಣ ಜನರು ಮತದಾನದಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿರುವುದು ಕಂಡು ಬರುತ್ತಿದೆ ಎಂದು ಗೋಪಾಲ ಸ್ವಾಮಿ ತಿಳಿಸಿದರು.
ವೇದಿಕೆಯಲ್ಲಿ ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಏಕನಾಥ ಬಾಳಿಗಾ, ಕಾರ್ಯದರ್ಶಿ ಸತೀಶ್ ಶೆಟ್ಟಿ, ಬಾಲಸುಬ್ರಹ್ಮಣ್ಯ ಫೌಂಡೇಶನ್ ಕಾರ್ಯದರ್ಶಿ ರಮಣ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.







