ಹಾನುಬಾಳು ಸರಕಾರಿ ಶಾಲೆಗೆ ಹೊಸ ರೂಪ: ಹಳೆ ವಿದ್ಯಾರ್ಥಿಗಳ ನಿರ್ಧಾರ

ಸಕಲೇಶಪುರ,ಜು.20: ತಾಲೂಕಿನ ಹಾನುಬಾಳು ಹೋಬಳಿ ಕೇಂದ್ರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನದ ಹಿಂದಿನ ಕಟ್ಟಡ ಶಿಥಿಲಗೊಂಡಿದ್ದು, ಇಲ್ಲಿನ ಹಳೆ ವಿದ್ಯಾರ್ಥಿಗಳು ಸಂಘ ಸ್ಥಾಪಿಸಿಕೊಂಡು ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ವಿಚಾರ ಎಂದು ಜಿಪಂ ಸದಸ್ಯ ಸುಪ್ರದೀಪ್ ಯಜಮಾನ್ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸುಮಾರು 104 ವರ್ಷಗಳ ಹಿಂದೆ ಕಟ್ಟಲಾಗಿರುವ ಈ ಶಾಲೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿರುವುದರಿಂದ ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದನ್ನು ಮನಗಂಡು ಸರಕಾರಿ ಶಾಲೆಯನ್ನು ಉಳಿಸುವುದು ಹಾಗೂ ತಾವು ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಇಲ್ಲಿನ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಸಂಘ ಸ್ಥಾಪಿಸಿಕೊಂಡು ಶಾಲೆಗೊಂದು ಸುಸಜ್ಜಿತ ಹೊಸ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈಗಾಗಲೇ 1.30 ಕೋಟಿ ರೂ.ವೆಚ್ಚದ ಅಂದಾಜು ಪಟ್ಟಿಯನ್ನೂ ಸಿದ್ಧಪಡಿಸಿದ್ದಾರೆ ಎಂದರು.
ಇದೇ ಶಾಲೆಯಲ್ಲಿ ಕಲಿತು ಪ್ರಥಮ ದರ್ಜೆ ಗುತ್ತಿಗೆದಾರರಾಗಿರುವ ಗಣೇಶ್ ಎಂಬವರು ಯಾವುದೇ ಲಾಭಾಂಶ ನಿರೀಕ್ಷೆ ಮಾಡದೆ ಹೊಸ ಕಟ್ಟಡ ಕಾಮಗಾರಿಯನ್ನು ನಿರ್ವಹಿಸುವುದಾಗಿ ಭರವಸೆ ನೀಡಿದ್ದಾರೆ. ಸ್ಥಳೀಯ ದಾನಿಗಳು ಧನ ಸಹಾಯ ನೀಡಲು ಮುಂದೆ ಬಂದಿದ್ದಾರೆ. ಸರಕಾರದ ಅನುದಾನ ಬಿಡುಗಡೆಯಾದರೆ ಕೂಡಲೇ ಕಾಮಗಾರಿ ಆರಂಭಿಸಿ ಮುಂದಿನ ಶೈಕ್ಷಣಿಕ ವರ್ಷದೊಳಗೆ ಹೊಸ ಕಟ್ಟಡ ಶಿಕ್ಷಣ ಸೇವೆಗೆ ಸಿದ್ಧಗೊಳ್ಳಲಿದೆ ಎಂದರು.
ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚಂದ್ರಣ್ಣ ಮಾತನಾಡಿ, ಈಗಾಗಲೇ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಪ್ರತೀ ಮಂಗಳವಾರ ಸಭೆ ನಡೆಸಿ ಶಾಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಸಂಘದ ಸದಸ್ಯರು ಹಾಗೂ ಸ್ಥಳೀಯ ದಾನಿಗಳು ಹಣ ನೀಡಲು ಮುಂದೆ ಬಂದಿದ್ದಾರೆ. ಸರಕಾರದಿಂದಲೂ ಹೆಚ್ಚಿನ ಅನುದಾನ ಅಗತ್ಯವಿರುವುದರಿಂದ ಶಾಸಕ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಶತಮಾನದ ಹಿಂದಿನ ಶಾಲೆಯಾದ್ದರಿಂದ ಅನುದಾನ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಶಿಕ್ಷಣ ಅಗತ್ಯವಿದೆ ಎನ್ನುವುದನ್ನು ಮನಗಂಡು ಈ ಸಾಲಿನಿಂದ ತಮ್ಮ ಸಂಘದ ವತಿಯಿಂದಲೇ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದೆ. ಈಗಾಗಲೇ ದಾಖಲಾತಿ ಆರಂಭವಾಗಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು. ಇಲ್ಲಿ ಕೆಲಸ ಮಾಡುವ ಶಿಕ್ಷಕರು ಹಾಗೂ ಸಿಬ್ಬಂದಿಗೆ ದಾನಿಗಳ ನೆರವಿನೊಂದಿಗೆ ಸಂಬಳವನ್ನೂ ನೀಡಲಾಗುವುದು ಎಂದರು.







