ವಿಟಿಯಿಂದ ವಿದ್ಯೆಗಾಗಿ ‘ಮನೆ ಬೆಳಕು’
ಯೋಜನೆ: ಉಡುಪಿಯಲ್ಲಿ ನಾಳೆ ಅನುಷ್ಠಾನ,
ಉಡುಪಿ, ಜು.20: ಕರ್ಣಾಟಕ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಮನೆಗಳಿಗೆ ಸೌರವಿದ್ಯುತ್ ಬೆಳಕನ್ನು ನೀಡುವ ಕಾರ್ಯಕ್ಕೆ ಮುಂದಾಗಿದೆ.
ಭಾರತೀಯ ವಿಕಾಸ ಟ್ರಸ್ಟ್ ಗ್ರಾಮೀಣ ಪ್ರದೇಶಗಳಲ್ಲಿ ಸೋಲಾರ್ ಶಕ್ತಿಯ ಪ್ರಚಾರ, ಅಳವಡಿಕೆಗೆ ಕಳೆದ 20 ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದೀಗ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಮನೆಗೆ ಸೋಲಾರ್ ದೀಪ ತಲುಪಿಸುವ ಕಾರ್ಯ ಮಾಡುತ್ತಿದೆ. ಕರ್ಣಾಟಕ ಬ್ಯಾಂಕಿನ ಸಹಕಾರದಿಂದ ಕಡಿಮೆ ಆದಾಯದ ವಿದ್ಯಾರ್ಥಿಗಳಿಗೂ ಸುಲಭ ಸಾಧ್ಯವಾಗುವಂತೆ ಸೋಲಾರ್ ದೀಪ ಅಳವಡಿಕೆಯ ವಿದ್ಯೆಗಾಗಿ ‘ಮನೆ ಬೆಳಕು’ ಯೋಜನೆಯನ್ನು ಕಳೆದ ಫೆಬ್ರವರಿಯಿಂದ ಪ್ರಾರಂಭಿಸಲಾಗಿತ್ತು. ಈ ಯೋಜನೆಯ ಮೂಲಕ ಉಡುಪಿ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳ ವಿವಿಧ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯುತ್ ಸಂಪರ್ಕವಿಲ್ಲದ ಸುಮಾರು 100 ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಎರಡು ದೀಪಗಳ ಸೋಲಾರ್ ಸಿಸ್ಟಮ್ಸ್‌ಗಳನ್ನು ಅಳವಡಿಸಡಿಸಲಾಗಿದೆ. ಈ ದೀಪಗಳಿಂದ ವಿದ್ಯಾರ್ಥಿಗಳ ಓದಿಗೆ ಬಹಳಷ್ಟು ಸಹಕಾರಿಯಾಗಿದೆ. ಈ ಯೋಜನೆಗಾಗಿ ಕರ್ಣಾಟಕ ಬ್ಯಾಂಕ್‌ನೊಂದಿಗೆ ಮಣಿಪಾಲದ ಸೆಲ್ಕೋ ಫೌಂಡೇಶನ್ ಕೂಡ ಕೈಜೋಡಿಸಿದ್ದು, ಯೋಜನೆಯ ಯಶಸ್ಸಿಗೆ ಸಹಕರಿಸಿದೆ. ವಿದ್ಯೆಗಾಗಿ ಬೆಳಕು ಯೋಜನೆಯ ಅನುಷ್ಠಾನ ಕಾರ್ಯಕ್ರಮವನ್ನು ಜು.22ರಂದು ಸಂಜೆ 4ಕ್ಕೆ ಉಡುಪಿ ಸಗ್ರಿಯ ಕೃಷ್ಣ ಹೆಬ್ಬಾರರ ಮನೆಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್‌ನ ಮುಖ್ಯ ಮಹಾಪ್ರಬಂಧಕ ಎಂ.ಎಸ್. ಮಹಾಬಲೇಶ್ವರ ಭಟ್ ಭಾಗವಹಿ ಸುವರು. ಅಧ್ಯಕ್ಷತೆಯನ್ನು ಬಿವಿಟಿಯ ಆಡಳಿತ ಟ್ರಸ್ಟಿ ಕೆ.ಎಂ.ಉಡುಪ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.





