ತಂಬಾಕು ಮತ್ತು ಮಾದಕ ವಸ್ತುಗಳ ಪತ್ತೆಗೆ ವಿಶೇಷ ನಿಗಾ
ಕೇರಳದಲ್ಲಿ ‘ಆಪರೇಷನ್ ಬಾಯ್’ ಕಾರ್ಯಾಚರಣೆ,
ಕಾಸರಗೋಡು, ಜು.20: ತಂಬಾಕು ಮತ್ತು ಮಾದಕ ವಸ್ತುಗಳ ಪತ್ತೆಗೆ ರಾಜ್ಯ ಅಬಕಾರಿ ದಳ ವಿಶೇಷ ನಿಗಾ ಇರಿಸಿದ್ದು, ‘ಆಪರೇಷನ್ ಬಾಯ್’ ಎಂಬ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರಂತೆ ಜಿಲ್ಲಾದ್ಯಂತ ಅಬಕಾರಿ ಇಲಾಖೆ ಸಮಗ್ರ ಶೋಧ ಆರಂಭಿಸಿದ್ದು, ಶಾಲಾ-ಕಾಲೇಜು ಪರಿಸರ, ರೈಲು, ಬಸ್ ನಿಲ್ದಾಣ ಪ್ರದೇಶಗಳು ಮತ್ತಿತರ ಗುಪ್ತ ಕೇಂದ್ರಗಳನ್ನು ವಿಶೇಷವಾಗಿ ದಾಳಿ ಮತ್ತು ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯ ವಿವಿಧೆಡೆಗಳಲ್ಲಿ ಎರಡು ದಿನಗಳಲ್ಲಿ ನಡೆಸಿದ ಶೋಧದಲ್ಲಿ ಭಾರೀ ಪ್ರಮಾಣದ ತಂಬಾಕು ಉತ್ಪನ್ನ, ಮಾದಕದ್ರವ್ಯ ಮತ್ತು ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.ಗಡಿಪ್ರದೇಶಗಳಲ್ಲಿ ವಿಶೇಷ ನಿಗಾ ಇರಿಸಿಕಾರ್ಯಾಚರಿಸುತ್ತಿದೆ. ಮಂಜೇಶ್ವರ ತಪಾಸಣಾ ಕೇಂದ್ರದಲ್ಲಿ ತೀವ್ರ ತಪಾಸಣೆಕೈಗೊಳ್ಳಲಾಗುತ್ತಿದೆ. ಈ ದಾರಿಯಾಗಿ ಕೇರಳಕ್ಕೆ ಬರುವ ಎಲ್ಲಾ ವಾಹನ ಗಳನ್ನು ಅಬಕಾರಿ ತಂಡ ತಪಾಸಣೆ ಗೊಳಪಡಿಸುತ್ತಿದೆ. ಜಿಲ್ಲೆಯಲ್ಲಿರುವ ಹೊರರಾಜ್ಯ ಕಾರ್ಮಿಕರಪೈಕಿ ಹೆಚ್ಚಿನವರು ಪಾನ್ ಮಸಾಲ ಮೊದಲಾದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದು, ಮಾತ್ರವಲ್ಲ ಮಾರಾಟ ಮಾಡುತ್ತಿರುವುದು ಕಂಡುಬಂದಿರುವ ಹಿನ್ನಲೆಯಲ್ಲಿ ಅವರ ವಾಸ್ತವ್ಯದ ಕೇಂದ್ರಗಳಲ್ಲೂ ತಪಾಸಣೆ ನಡೆಸಲು ಅಬಕಾರಿ ಇಲಾಖೆ ಮುಂದಾಗಿದೆ.





