ಒಲಿಂಪಿಕ್ಸ್‌ನಿಂದ ರಶ್ಯ ನಿಷೇಧ ವಿಚಾರ : ವಾರದಲ್ಲಿ ಐಒಸಿ ಅಂತಿಮ ನಿರ್ಧಾರ

ಪ್ಯಾರಿಸ್, ಜು.20: ರಶ್ಯ ಸರಕಾರವೇ ಉದ್ದೀಪನಾ ಮದ್ದು ಸೇವನೆಗೆ ಉತ್ತೇಜನ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ರಶ್ಯ ಅಥ್ಲೀಟ್‌ಗಳನ್ನು ರಿಯೋ ಒಲಿಂಪಿಕ್ಸ್‌ನಿಂದ ನಿಷೇಧ ಹೇರುವ ಕುರಿತು ಇನ್ನು ಒಂದು ವಾರದೊಳಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಬುಧವಾರ ಸ್ಪಷ್ಟಪಡಿಸಿದೆ.
ಅತ್ಯಂತ ದೊಡ್ಡ ಡೋಪಿಂಗ್ ಹಗರಣವನ್ನು ನಿಭಾಯಿಸಬೇಕಾದ ಸವಾಲು ಹೊಂದಿರುವ ಐಒಸಿ ರಶ್ಯದ ಅಥ್ಲೀಟ್‌ಗಳಿಗೆ ಆ.5 ರಿಂದ ಆರಂಭವಾಗಲಿರುವ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೇ, ಬೇಡವೇ ಎಂಬ ಬಗ್ಗೆ ಕ್ರೀಡಾ ಪಂಚಾಯಿತಿ ನ್ಯಾಯಾಲಯದ(ಸಿಎಎಸ್) ತೀರ್ಪು ಹೊರ ಬಂದ ಬಳಿಕ ಪ್ರಕಟಿಸುವ ಸಾಧ್ಯತೆಯಿದೆ.
‘‘ನಾವು ಎಲ್ಲ ಕಾನೂನು ಆಯ್ಕೆಯನ್ನು ಅಧ್ಯಯನ ನಡೆಸುವ ಅವಶ್ಯವಿದೆ. ಒಲಿಂಪಿಕ್ ಇತಿಹಾಸದಲ್ಲಿ ಅತ್ಯಂತ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲ ಸಾಧ್ಯತೆಯನ್ನು ಪರಿಶೀಲಿಸಲಿದ್ದೇವೆ’’ ಎಂದು ಐಒಸಿ ಹೇಳಿದೆ.
ರಶ್ಯದಲ್ಲಿ ಅಥ್ಲೀಟ್‌ಗಳು ಡೋಪಿಂಗ್ ಪ್ರಕರಣದಲ್ಲಿ ಸಿಲುಕದಂತೆ ವ್ಯವಸ್ಥೆ ಮಾಡಲಾಗಿದೆ. ಇದು ಕ್ರೀಡೆ ಹಾಗೂ ಒಲಿಂಪಿಕ್ಸ್ ಗೇಮ್ಸ್‌ನ ಪ್ರಾಮಾಣಿಕತೆಯ ಮೇಲೆ ಹಿಂದೆಂದೂ ಆಗದ ದಾಳಿಯಾಗಿದೆ ಎಂದು ವಿಶ್ವ ಉದ್ದೀಪನಾ ತಡೆ ಘಟಕಕ್ಕೆ ವರದಿ ಸಲ್ಲಿಸಿರುವ ಕೆನಡಾದ ವಕೀಲ ರಿಚರ್ಡ್ ಮೆಕ್ಲಾರೆನ್ ಹೇಳಿದ್ದಾರೆ. ವಾಡಾ ರಶ್ಯವನ್ನು ಒಲಿಂಪಿಕ್ಸ್‌ನಿಂದ ನಿಷೇಧ ಹೇರಬೇಕೆಂದು ಕರೆ ನೀಡಿದೆ. ಅಮೆರಿಕ, ಕೆನಡಾ, ಜರ್ಮನಿ, ಜಪಾನ್ ಹಾಗೂ ಇತರ ದೇಶಗಳು ರಶ್ಯವನ್ನು ನಿಷೇಧಿಸುವುದಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ರಶ್ಯದ ವಿರುದ್ಧ ಡೋಪಿಂಗ್ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಅಸೋಸಿಯೇಶನ್(ಐಎಎಎಫ್) ರಶ್ಯದ ಟ್ರಾಕ್ ಆ್ಯಂಡ್ ಫೀಲ್ಡ್ ಅಥ್ಲೀಟ್‌ಗಳನ್ನು ನಿಷೇಧಿಸಿತ್ತು. ರಶ್ಯದ ಅಥ್ಲೀಟ್‌ಗಳು ಐಎಎಎಫ್‌ನ ನಿಷೇಧದ ವಿರುದ್ಧ ಕ್ರೀಡಾ ಪಂಚಾಯಿತಿ ನ್ಯಾಯಾಲಯ(ಸಿಎಎಸ್) ಮೆಟ್ಟಿಲೇರಿದೆ. ಸಿಎಎಸ್ ಗುರುವಾರ ತನ್ನ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿದೆ.
ರಶ್ಯದ ಅಥ್ಲೀಟ್‌ಗಳು ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬೀಳದ ಕಾರಣ ಅವರನ್ನು ಒಲಿಂಪಿಕ್ಸ್‌ನಿಂದ ನಿಷೇಧ ಹೇರುವುದು ತಪ್ಪು ಎಂದು ಹಲವಾರು ನ್ಯಾಶನಲ್ ಒಲಿಂಪಿಕ್ಸ್ ಸಮಿತಿಗಳು ಒತ್ತಾಯಿಸಿವೆ.







