ಪ್ರೊ ಕಬಡ್ಡಿ: ಮುಂಬಾ ವಿರುದ್ಧ ಪುಣೇರಿ ಪಲ್ಟಿ

ಮುಂಬೈ, ಜು.20: ನಾಯಕ ಅನೂಪ್ ಕುಮಾರ್ ಅಮೋಘ ಪ್ರದರ್ಶನದ ನೆರವಿನಿಂದ ಪ್ರೊ ಕಬಡ್ಡಿಯಲ್ಲಿ ಪುಣೇರಿ ಪಲ್ಟನ್ ವಿರುದ್ಧ ಮುಂಬಾ ತಂಡ 34-31 ಅಂತರದಿಂದ ಜಯ ಸಾಧಿಸಿದೆ.
ಗುರುವಾರ ಇಲ್ಲಿ ತಾನಾಡಿದ 10ನೆ ಪಂದ್ಯಗಳಲ್ಲಿ 6ನೆ ಜಯ ದಾಖಲಿಸಿದ ಮುಂಬಾ ಒಟ್ಟು 32 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 4ನೆ ಸ್ಥಾನ ತಲುಪಿದೆ. ಈ ಗೆಲುವಿನೊಂದಿಗೆ ಮುಂಬಾ ತಂಡ ಈ ಹಿಂದಿನ ಪಂದ್ಯದಲ್ಲಿನ 19-41 ಅಂತರದ ಹೀನಾಯ ಸೋಲಿಗೆ ಸೇಡು ತೀರಿಸಿಕೊಂಡಿತು.
ನಾಯಕ ಮಂಜೀತ್ ಚಿಲ್ಲರ್ ಅನುಪಸ್ಥಿತಿಯಲ್ಲಿ ಆಡಿರುವ ಪುಣೇರಿ ತಂಡ ಅಂಕಪಟ್ಟಿಯಲ್ಲಿ 5ನೆ ಸ್ಥಾನದಲ್ಲಿದೆ.
ಮುಂಬಾ ತಂಡದ ಅನೂಪ್‌ಗೆ ಸುರ್ಜೀತ್, ಜೀವಾ ಕುಮಾರ್, ರಿಶಾಂಕ್ ದೇವಾಡಿಗ ಹಾಗೂ ರಾಕೇಶ್ ಕುಮಾರ್ ಉತ್ತಮ ಸಾಥ್ ನೀಡಿದರು.
ಮಹಿಳಾ ಕಬಡ್ಡಿ ಚಾಲೆಂಜ್: ಸ್ಟೋರ್ಮ್ ಕ್ವೀನ್ಸ್ ಫೈನಲ್‌ಗೆ
ಮಹಿಳಾ ಕಬಡ್ಡಿ ಚಾಲೆಂಜ್‌ನಲ್ಲಿ ಮಮತಾ ಪೂಜಾರಿ ನೇತೃತ್ವದ ಫೈಯರ್ ಬರ್ಡ್ಸ್ ತಂಡವನ್ನು 21-11 ರಿಂದ ಮಣಿಸಿದ ತೇಜಸ್ವಿನಿ ಬಾಯಿ ಮುಂದಾಳತ್ವದ ಸ್ಟೋರ್ಮ್ ಕ್ವೀನ್ಸ್ ತಂಡ ಫೈನಲ್‌ಗೆ ಪ್ರವೇಶಿಸಿದೆ.
ಕ್ವೀನ್ಸ್ ತಂಡ 4 ಪಂದ್ಯಗಳಲ್ಲಿ 13 ಅಂಕ ಗಳಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ. ಫೈರ್ ಬರ್ಡ್ಸ್ ಜು.25 ರಂದು ನಡೆಯಲಿರುವ ಕ್ವಾಲಿಫೈಯರ್ ಪಂದ್ಯದಲ್ಲಿ ಐಸ್ ಡಿವಾಸ್ ತಂಡವನ್ನು ಎದುರಿಸಲಿದೆ.ಈ ಪಂದ್ಯದಲ್ಲಿ ಎರಡನೆ ಫೈನಲಿಸ್ಟ್ ನಿರ್ಧಾರವಾಗಲಿದೆ.
ಈ ಪಂದ್ಯದಲ್ಲಿ ತೇಜಸ್ವಿನಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ, ಮಮತಾ ಪೂಜಾರಿ ಅಂಕ ಗಳಿಸಲು ಪರದಾಟ ನಡೆಸಿದರು.







