ಅಪಸ್ಮಾರ ಕಾಯಿಲೆ ಆರೈಕೆಗೆ ಸಮಗ್ರ ಯೋಜನೆ ಅಭಿವೃದ್ಧಿ’
ಮಣಿಪಾಲ, ಜು.20: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನರರೋಗ ಮತ್ತು ನರಶಸ್ತ್ರಚಿಕಿತ್ಸಾ ವಿಭಾಗದಲ್ಲಿ ವೈದ್ಯಕೀಯ ವಾಗಿ ಹತೋಟಿಗೆ ತರಲಾಗದ ಅಪಸ್ಮಾರ ಇರುವವರಲ್ಲಿ ಅದರ ವೌಲ್ಯಮಾಪನ ಮತ್ತು ನಿರ್ವಹಣೆಗೆ ಸಮಗ್ರ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ನರರೋಗ ವಿಭಾಗದ ಡಾ.ಶಂಕರ್ ಪ್ರಸಾದ್ ಗೊರ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.ಪ್ರತೀ ತಿಂಗಳು ಸುಮಾರು 6-10 ಬಾರಿ ಸೆಳವಿನ ಆಘಾತಗಳಿಗೆ ತುತ್ತಾಗಿ ಪ್ರಜ್ಞೆ ತಪ್ಪುತ್ತಿದ್ದ ಉತ್ತರ ಕೇರಳದ 26ವರ್ಷ ಪ್ರಾಯದ ಯುವತಿಯನ್ನು ಮಣಿಪಾಲ ಆಸ್ಪತ್ರೆಯ ನರ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಗಿರೀಶ್ ಮೆನನ್ ಮತ್ತು ಪರಿಣತ ಶಸ್ತ್ರಚಿಕಿತ್ಸಕರ ತಂಡವು ವಿವಿಧ ಪರೀಕ್ಷೆಗಳ ಮೂಲಕ ಆಮೂಲಾಗ್ರ ಮೌಲ್ಯಮಾಪನ ಮಾಡಿ, ಅವರ ಸೆಳವು ಮೆದುಳಿನ ಬಲ ಕಪೋಲದ ಹಾಲೆಯಲ್ಲಿ ಉಗಮವಾಗುತ್ತದೆ ಎಂಬುದನ್ನು ಕಂಡು ಹಿಡಿದು ಶಸ್ತ್ರಚಿಕಿತ್ಸೆಗೆ ಒಳಪಡಿಸಿತು. ರೈಟ್ ಮೆಸಿಯಲ್ ಟೆಂಪೊರಲ್ ಸ್ಕ್ಲಿರೋಸಿಸ್ ಎಂದು ಕರೆಯುವ ಕಾಯಿಲೆಗೆ ತುತ್ತಾಗಿರುವ ಯುವತಿ ಶಸ್ತ್ರ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ ಎಂದರು.ಯುವತಿ ಸೇರಿದಂತೆ ಸುಮಾರು 7ರೋಗಿಗಳು ಅಪಸ್ಮಾರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಅವರಲ್ಲಿ ಉತ್ತಮ ಫಲಿತಾಂಶ ಕಂಡು ಬಂದಿದೆ. ಈ ಶಸ್ತ್ರಚಿಕಿತ್ಸೆಯಿಂದ ರೋಗಿಯು ಸೆಳವು ಮತ್ತು ಔಷಧಿಯಿಂದ ಮುಕ್ತವಾಗುವ ಅವಕಾಶ ಶೇ. 80ರಷ್ಟಿರುತ್ತದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಜ್ಞ ವೈದ್ಯ ಡಾ.ಗಿರೀಶ್ ಮೆನನ್, ಡಾ.ಜಯ ಕೃಷ್ಣನ್, ಡಾ.ವಿಜಯಕುಮಾರ್, ಅನಿಲ್ ಜೇಕಬ್ ಮತ್ತಿತರರು ಉಪಸ್ಥಿತರಿದ್ದರು.





