ಖರ್ಗೆಯನ್ನು ಸಿಎಂ ಮಾಡುವಂತೆ ಜಾಫರ್ ಶರೀಫ್ ಆಗ್ರಹ

ಬೆಂಗಳೂರು, ಜು.21: ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಯನ್ನು ದೂರ ಮಾಡಲು ನಾಯಕತ್ವ ಬದಲಾವಣೆ ಅನಿವಾರ್ಯ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಖರ್ಗೆ ಅವರನ್ನು ಮುಖ್ಯ ಮಂತ್ರಿಯಾಗಿ ನೇಮಕ ಮಾಡುವಂತೆ ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಅವರು ಕಾಂಗ್ರೆಸ್ ಹೈಕಮಾಂಡ್‌ನ್ನು ಆಗ್ರಹಿಸಿದ್ದಾರೆ.
"ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಮರಳಿ ಪಡೆಯಲು ನಾಯಕತ್ವದ ಬದಲಾವಣೆ ಅನಿವಾರ್ಯ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೆನಿಸಿಕೊಂಡಿರುವ ಖರ್ಗೆ ಮತ್ತು ಪರಮೇಶ್ವರ ಅವರು ಮುಖ್ಯ ಮಂತ್ರಿ ಹುದ್ದೆಗೆ ಅರ್ಹ ನಾಯಕರು. ಪಕ್ಷದ ನಾಯಕತ್ವ ಬದಲಾದರೆ ಬೇರೆ ಬೇರೆ ಪಕ್ಷಗಳಿಂದ ಬೇರೆ ಬೇರೆ ನಾಯಕರು ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದು ಜಾಫರ್ ಶರೀಫ್ ಹೇಳಿದ್ದಾರೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೆಲವು ವಿವಾದಗಳನ್ನು ಸಮರ್ಥವಾಗಿ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿರುವ ಜಾಫರ್ ಶರೀಫ್" ಸಿಎಂ ಹುದ್ದೆ ಯಾರ ಆಸ್ತಿಯೋ ಅಲ್ಲ. ಇದು ಪಕ್ಷದ ಸಾಧನೆಯಿಂದ ಬರುವ ಆಸ್ತಿಯಾಗಿದೆ. ಪಕ್ಷದ ಹಿತಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ದರಾಗಿರಬೇಕು ” ಎಂದು ಜಾಫರ್ ಶರೀಫ್ ಆಗ್ರಹಿಸಿದ್ದಾರೆ.





