ಬಿಜೆಪಿ ವಿಭಜಿಸಿ ಆಳುವ ಸುಳ್ಳು ಭರವಸೆ ನೀಡುವ ಪಕ್ಷ: ಹಾರ್ದಿಕ್ ಪಟೇಲ್

ಅಹ್ಮದಾಬಾದ್, ಜು.21: ``ಬಿಜೆಪಿ ವಿಭಜಿಸಿ ಆಳುವ ಹಾಗೂ ಜಾತಿ, ಧರ್ಮಗಳ ಆಧಾರದಲ್ಲಿ ತಾರತಮ್ಯ ಮಾಡುವ ಪಕ್ಷವಾಗಿದೆ,'' ಎಂದು ಗುಜರಾತ್ ಪಟೇಲ್ ಆಂದೋಲನದ ನಾಯಕ, ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಭಾಗ್ಯ ಕಂಡ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಆಂಗ್ಲ ಪತ್ರಿಕೆಯೊಂದರ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ``ಬಿಜೆಪಿಗೆ ಅಭಿವೃದ್ಧಿಯ ಮೇಲೆ ನಂಬಿಕೆಯಿಲ್ಲ. ಅದಕ್ಕೆ ಕೇವಲ ಜಾತಿ ಆಧರಿತ ಹಿಂಸೆ ನಡೆಯಬೇಕಿದೆ. ಗುಜರಾತ್ ನ ದಲಿತ ಸಮುದಾಯದ ಪ್ರತಿಭಟನೆಯ ಹಿಂದೆಯೂ ಸರಕಾರದ ವಿರುದ್ಧ ಜನರ ಆಕ್ರೋಶವಿದೆ,'' ಎಂದು ಅವರು ತಿಳಿಸಿದರು. ``ಬಿಜೆಪಿ ಯಾವತ್ತೂ ಹಿಂಸೆಯನ್ನು ಉತ್ತೇಜಿಸಿದೆ. 2002ರ ಗಲಭೆಗಳು ಇದಕ್ಕೆ ಸಾಕ್ಷಿ,''ಎಂದವರು ಹೇಳಿದರು.
``ಇಂದು ಗುಜರಾತ್ ನ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆಯಿದ್ದರೂ ದೇಶದಾದ್ಯಂತ ಗುಜರಾತ್ ಮಾದರಿಯ ಬಗ್ಗೆ ಭ್ರಮಾಲೋಕವನ್ನು ಸೃಷ್ಟಿಸಲಾಗುತ್ತಿದೆ,''ಎಂದು ಆರೋಪಿಸಿದ ಹಾರ್ದಿಕ್``ಜನರಿಗೆ ಅಭಿವೃದ್ಧಿ ಬೇಕಾಗಿದೆ. ಈಗಿನ ಅಗತ್ಯ `ಮೇಕ್ ಇನ್ ಇಂಡಿಯಾ' ಅಲ್ಲ ಬದಲಾಗಿ `ಮೇಡ್ ಇನ್ ಇಂಡಿಯಾ' ಎಂದು ಹಾರ್ದಿಕ್ ಅಭಿಪ್ರಾಯಪಟ್ಟರು.
`ಯಾವತ್ತೂ ದೇಶದ ಹೊರಗೆ ಇರುವ ನರೇಂದ್ರ ಮೋದಿಯನ್ನು ಅನಿವಾಸಿ ಪ್ರಧಾನಿ ಎಂದು ಕರೆಯಬಹುದು,'' ಎಂದೂ ಅವರು ವ್ಯಂಗ್ಯವಾಡಿದರು.
``ಪ್ರತಿ ದಿನ ದಯನೀಯ ಸ್ಥಿತಿಯಲ್ಲಿರುವ ಹಲವಾರು ಗೋವುಗಳನ್ನು ನಾವು ನೋಡುತ್ತೇವೆ, ಒಬ್ಬರಿಗೆ ನಿಜಾರ್ಥದಲ್ಲಿ ಗೋರಕ್ಷಕರಾಗಬೇಕೆಂದಿದ್ದರೆ ಗೋವುಗಳನ್ನು ಅವರೇಕೆ ಗೋಶಾಲೆಗೆ ಸೇರಿಸುವುದಿಲ್ಲ? ನೈತಿಕ ಪೊಲೀಸರ ದಾದಾಗಿರಿ ಕಸಾಯಿಖಾನೆಗಳನ್ನು ತಲುಪುವುದಿಲ್ಲ. ಅದರಿಂದ ಕೇವಲ ಸಾಮಾನ್ಯ ಜನರು ಬಾಧಿತರಾಗುತ್ತಾರೆ,'' ಎಂದು ಹಾರ್ದಿಕ್ ಹೇಳಿದರು.
``ಬಿಜೆಪಿ ಗುಜರಾತ್ ಮೇಲೆ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ. ಕಳೆದ ವರ್ಷದ ಪಂಚಾಯತ್ ಚುನಾವಣೆಯ ಫಲಿತಾಂಶವೇ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಮರುಕಳಿಸಿವುದು," ಎಂದು ಹಾರ್ದಿಕ್ ಭವಿಷ್ಯ ನುಡಿದರು.







