ಪುತ್ತೂರು: ಪಾಣಾಜೆ ವಿವೇಕ ಶಾಲೆಯಲ್ಲಿ ಬಿಸಿಯೂಟ ಉದ್ಘಾಟನೆ

ಪುತ್ತೂರು, ಜು.21: ಪಾಣಾಜೆಯ ವಿವೇಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು.
ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಬಿಸಿಯೂಟದ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ, ಶುಚಿತ್ವದ ಆಹಾರವನ್ನು ನೀಡುವುದರೊಂದಿಗೆ ಮಕ್ಕಳ ಆರೋಗ್ಯ ಉತ್ತಮವಾಗುವುದರೊಂದಿಗೆ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚುತ್ತದೆ. ಸುಸಂಸ್ಕೃತ ಶಿಕ್ಷಣವನ್ನು ಶಿಕ್ಷಕರು ನೀಡಿದರೆ ಮುಂದೆ ಮಕ್ಕಳು ಸುಸಂಸ್ಕೃತರಾಗಿ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ತಾಲೂಕು ಪಂಚಾಯತ್ ಸದಸ್ಯೆ ಮೀನಾಕ್ಷಿ ಮಂಜುನಾಥ್ ಮಾತನಾಡಿ, ಬಿಸಿಯೂಟದಿಂದ ಮಕ್ಕಳ ದೈಹಿಕ ಬೆಳವಣಿಗೆ ವೃದ್ದಿಸುವುದರೊಂದಗೆ ಶಿಕ್ಷಣದ ಗುಣಮಟ್ಟವೂ ಬೆಳೆಯಲೂ ಕಾರಣವಾಗುತ್ತದೆ ಎಂದು ತಿಳಿಸಿದರು. ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಪದ್ಮಾವತಿ ಡೆಂಗ್ ಜ್ವರದ ಲಕ್ಷಣ ಹಾಗೂ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರವೀಂದ್ರ ಭಂಡಾರಿ ಬೈಂಕ್ರೋಡ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷ ಜಯರಾಮ ರೈ ಕಡಮಾಜೆ , ಪ್ರಗತಿಪರ ಕೃಷಿಕ ಪ್ರವೀಣ್ ಭಟ್ ಭರಣ್ಯ, ಆನ್ಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಶಾಹುಲ್ ಹಮೀದ್ ಜಾಲಗದ್ದೆ, ಪಾಣಾಜೆ ಗ್ರಾ.ಪಂ.ಸದಸ್ಯೆ ಮೈಮುನತುಲ್ ಮೆಹ್ರ, ಸದಾಶಿವ ರೈ ಸೂರಂಬೈಲು ಉಪಸ್ಥಿತರಿದ್ದರು.
ಪಾಣಾಜೆ ಗ್ರಾ.ಪಂ.ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಗುರು ಸುನೀತಿ ಪಿ. ಸ್ವಾಗತಿಸಿ ಸಹ ಶಿಕ್ಷಕಿ ರೇಷ್ಮಾ ವಂದಿಸಿದರು. ಸಹಶಿಕ್ಷಕಿ ಜಯಂತಿ ಭಟ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಪೋಷಕರು ಮತ್ತು ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.







