ಬೆಳ್ತಂಗಡಿ: ಬೆಲೆ ಏರಿಕೆ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ

ಬೆಳ್ತಂಗಡಿ, ಜು.21: ಬೆಲೆ ಏರಿಕೆಯನ್ನು ಇಳಿಸುತ್ತೇವೆ, ಜನರಿಗೆ ಒಳ್ಳೆಯ ದಿನಗಳನ್ನು ತರುತ್ತೇವೆ ಎಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಇಂದು ಮಾಡುವ ಎಲ್ಲಾ ಕೆಲಸಗಳು ಜನವಿರೋಧಿಯಾಗಿದ್ದು ನಿರಂತರ ಬೆಲೆ ಏರಿಕೆ, ಕಾರ್ಮಿಕರಿಗೆ, ರೈತರಿಗೆ ಅಭದ್ರತೆ, ನಿರುದ್ಯೋಗ, ದಲಿತ ದೌರ್ಜನ್ಯಗಳೇ ಅಲ್ಲದೆ ಕೋಮುವಾದಿಗಳ ಅಟ್ಟಹಾಸಕ್ಕೆ ಆಸ್ಪದ ನೀಡುತ್ತಾ ಸರ್ವಾಧಿಕಾರಿ ಆಡಳಿತ ನಡೆಸುತ್ತಾ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ.
ಸಿಪಿಐ(ಎಂ) ಪಕ್ಷದ ವತಿಯಿಂದ ದೇಶದಾದ್ಯಂತ ಜುಲೈ 11 ರಿಂದ 25ರ ವರೆಗೆ ಕೇಂದ್ರ ಸರಕಾರದ ಜನವಿರೋಧಿ ನೀತಿಯ ವಿರುದ್ಧ ನಡೆಯುತ್ತಿರುವ ಹೋರಾಟದ ಅಂಗವಾಗಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು.
ಸೌಜನ್ಯ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಆದೇಶವಾಗಿದ್ದರೂ ಇನ್ನೂ ನ್ಯಾಯ ಸಿಗಲಿಲ್ಲ ಎಂಬ ಸತ್ಯ ಗೊತ್ತಿರುವ ಬಿಜೆಪಿ ಡಿವೈಎಸ್ಪಿ ಗಣಪತಿ ಅವರಿಗೂ ಮೋಸ ಮಾಡುವ ಇರಾದೆಯಿಂದ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದೆ ಎಂದ ಅವರು ಮೊದಲು ಸಿಬಿಐ ಸೌಜನ್ಯಳಿಗೆ ನ್ಯಾಯ ಒದಗಿಸಿ ತಾನು ಸಾಚಾ ಎಂದು ಸಾಬೀತುಗೊಳಿಸಲಿ ಎಂದರು.
ನಂತರ ಮಾತಾಡಿದ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ನ್ಯಾಯವಾದಿ ಶಿವಕುಮಾರ್, ಇಂದು ರೈತರಿಗೆ ನಕಲಿ ಬೀಜಗಳನ್ನು ವಿತರಿಸಿ ಮೋಸ ಮಾಡಲಾಗುತ್ತಿದೆ. ಪೆಟ್ರೋಲ್ ದರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿತವಾಗಿ ಲೀಟರಿಗೆ 16 ರೂ.ಗೆ ಸಿಗಬೇಕಾಗಿದ್ದ ಪೆಟ್ರೋಲನ್ನು 66 ರೂ.ಗೆ ಮಾರಾಟ ಮಾಡುವಂತೆ ಮಾಡಿದ ಮೋದಿ ಸರಕಾರವು ಆಹಾರ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿದೆ. ಗಣಪತಿ ಪ್ರಕರಣದಲ್ಲಿ ಜಾರ್ಜ್ ಅವರ ರಾಜಿನಾಮೆ ಕೇಳುವ ಬಿಜೆಪಿಯು ವೇಮುಲಾ ಪ್ರಕರಣದಲ್ಲಿ ದತ್ತಾತ್ರೇಯರನ್ನಾಗಲಿ, ಸ್ಮತಿ ಇರಾನಿಯದ್ದಾಗಲಿ, ರಾಜಿನಾಮೆ ಪಡೆದಿದ್ದಾರೆಯೇ? ಕಲ್ಲಪ್ಪ ಪ್ರಕರಣದಲ್ಲಿ ಸಂಘಪರಿವಾರದ ಮುಖಂಡನ ಬಂಧನ, ವಿನಾಯಕ ಬಾಳಿಗ ಪ್ರಕರಣದಲ್ಲಿ ನಮೋ ಬ್ರಿಗೇಡ್ ನಾಯಕ ನರೇಶ್ ಶೆಣೈ ಬಂಧನವಾಗಿದ್ದರೂ ಯಾವ ಸ್ಥಳೀಯ ಬಿಜೆಪಿ ಪಕ್ಷದ ಜನಪ್ರತಿನಿಧಿಗಳ ರಾಜಿನಾಮೆ ಕೊಡಿಸಿದ್ದಾರೆ ಎಂದವರು ಪ್ರಶ್ನಿಸಿದರು.
ಪಕ್ಷದ ತಾಲೂಕು ಸಮಿತಿ ಸದಸ್ಯೆ ರೋಹಿಣಿ ಮನವಿ ಓದಿದರು. ಪಟ್ರಮೆ ಪಂಚಾಯತು ಸದಸ್ಯ ಶ್ಯಾಮರಾಜ್ ವಂದಿಸಿದರು. ಹೋರಾಟದ ನೇತೃತ್ವದಲ್ಲಿ ಪಕ್ಷದ ತಾಲೂಕು ಮುಖಂಡರಾದ ನೆಬಿಸಾ, ಜಯರಾಮ ಮಯ್ಯ, ಡೊಂಬಯ ಗೌಡ ಹಾಗೂ ಸಂಘಟನೆಗಳ ಮುಖಂಡರಾದ ಧನಂಜಯ ಗೌಡ, ವಸಂತ ಪಟ್ರಮೆ, ಮೀನಾಕ್ಷಿ, ಜಯಂತಿ, ಜಯಶ್ರೀ, ಇಂದಿರಾ, ಕಿರಣಪ್ರಭ, ಕುಮಾರಿ, ರಾಮಚಂದ್ರ, ವೀಣಾ ಹೊಸಂಗಡಿ, ಕುಸುಮಾವತಿ ಮೊದಲಾದವರು ಇದ್ದರು.







