ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಮತ್ತೆ ತರಗತಿಗೆ ಅವಕಾಶ: ಸೇಠ್
‘ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಶಿಕ್ಷಕರ ಮರು ನಿಯೋಜನೆ’

ಬೆಂಗಳೂರು, ಜು.21: ಪ್ರಸ್ತುತ ಸಾಲಿನಿಂದ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮತ್ತೆ ತರಗತಿಗೆ ಸೇರಲು ಅವಕಾಶ ಕಲ್ಪಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ 47 ಸಾವಿರ ಶಾಲೆಗಳಲ್ಲಿದ್ದು, ಬೆಂಗಳೂರು, ಕಲಬುರ್ಗಿ, ಬೆಳಗಾವಿ ವಿಭಾಗದ ಎಲ್ಲ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಗಿದ್ದು ಮೈಸೂರು ಭಾಗದ ಕೆಲವು ಜಿಲ್ಲೆಗಳಲ್ಲಿ ವಿತರಣೆ ಬಾಕಿ ಶೀಘ್ರದಲ್ಲೆ ಸಮವಸ್ತ್ರ ವಿತರಿಸಲಾಗುವುದು ಎಂದರು.
ದಾಖಲಾತಿ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಈ ತಿಂಗಳ ಅಂತ್ಯದೊಳಗೆ ಎಲ್ಲ ವಿದ್ಯಾರ್ಥಿಗಳಿಗೆ, ಸಮವಸ್ತ್ರ, ಸೈಕಲ್ ಹಾಗೂ ಪಠ್ಯ-ಪುಸ್ತಕ ವಿತರಣೆ ಕಾರ್ಯ ಪೂರ್ಣಗೊಳಿಸಲಾಗುವುದು. ಆ ಬಳಿಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿಕ್ಷಕರ ನೇಮಕ: ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಒಟ್ಟು 22ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟು 13,306 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ತನ್ವೀರ್ ಸೇಠ್ ತಿಳಿಸಿದರು.
ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ಸಂಪುಟದಲ್ಲಿ ಚರ್ಚಿಸಿ, ಶಿಕ್ಷಕರ ನೇಮಕಾತಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಮುಂದಿನ ಶೈಕ್ಷಣಿಕ ವರ್ಷದಿಂದ ನೇಕಾರರಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಸರಕಾರಿ ಸ್ವಾಮ್ಯದ ಕೈಮಗ್ಗ ಸಂಸ್ಥೆಗಳಿಂದ ಸಮವಸ್ತ್ರ ಖರೀದಿಸಲಾಗುವುದು ಎಂದರು.
ಕುಡಿಯುವ ನೀರು: ರಾಜ್ಯದಲ್ಲಿನ ಸರಕಾರಿ, ಅನುದಾನಿತ ಸೇರಿದಂತೆ ಎಲ್ಲ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದ ಅವರು, ಶಾಲೆಗಳಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಆಸ್ಥೆ ವಹಿಸಲಾಗಿದೆ ಎಂದರು.
ಯಾವುದೇ ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನಿಯೋಜಿಸಲಾಗುವುದು. ಅಲ್ಲದೆ, ವಿಷಯವಾರು ಶಿಕ್ಷಕರ ನೇಮಕಕ್ಕಾಗಿ ಕ್ರಮಕೈಗೊಳ್ಳಲಾಗುವುದು. ಶಿಕ್ಷಕರ ವರ್ಗಾವಣೆ ನೀತಿಯಲ್ಲಿ ಗೊಂದಲಗಳಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಲಾಖೆಯಲ್ಲಿ ಬಾಕಿ ಉಳಿದಿರುವ ಕಡತಗಳ ವಿಲೇವಾರಿಗೆ ಸೂಚನೆ ನೀಡಿ ಆದೇಶ ಹೊರಡಿಸಲಾಗಿದೆ. ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಧಿಕಾರಿಗಳ ಬಳಿಯ ವಿವಿಧ ಕಚೇರಿಗಳಲ್ಲಿನ ವಿವಿಧ ಶಾಖೆಗಳಲ್ಲಿ ಬಾಕಿಯಿರುವ ಕಡತಗಳನ್ನು ಏಳು ದಿನಗಳ ಒಳಗಾಗಿ ವಿಲೇವಾರಿ ಮಾಡಬೇಕು ಎಂದು ಅವರು ಸೂಚಿಸಿದರು.
ಗೊಂದಲವಿಲ್ಲ..
‘ಶಿಕ್ಷಕರ ಸರಾಸರಿ ಅನುಪಾತ ಪ್ರಾಥಮಿಕ(40:1) ಪ್ರೌಢ ಶಾಲೆಗಳಲ್ಲಿ(35:1) ಇರಬೇಕು. ರಾಜ್ಯದಲ್ಲಿ ಪ್ರಸ್ತುತ (30:1) ಅನುಪಾತಕ್ಕಿಂತ ಹೆಚ್ಚುವರಿ ಆಗಿರುವ ಶಿಕ್ಷಕರನ್ನು ಮರು ನಿಯೋಜನೆ ಮಾಡಲಾಗುತ್ತಿದೆ. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿ ಹೆಚ್ಚುವರಿ ಶಿಕ್ಷಕರಿದ್ದು, ಕೊರತೆ ಎದುರಿಸುತ್ತಿರುವ 21 ಜಿಲ್ಲೆಗಳಗೆ ಹೆಚ್ಚುವರಿ ಶಿಕ್ಷಕರನ್ನು ಮರು ನಿಯೋಜಿಸಲಾಗುವುದು. ಈ ಹಿಂದೆಯಿದ್ದ ತಾಲೂಕು ಮಟ್ಟದ ಘಟಕದ ಬದಲಿಗೆ ಜಿಲ್ಲಾ ಮಟ್ಟದಲ್ಲಿ ಘಟಕ ಮಾಡಿದ್ದು, ಜಿಲ್ಲೆಯಿಂದ ಜಿಲ್ಲೆಗೆ ನಿಯೋಜನೆಗೆ ಅವಕಾಶ ಕಲ್ಪಿಸಲಾಗಿದೆ. ಪತಿ-ಪತ್ನಿಗೆ ಆದ್ಯತೆ ನೀಡಲಾಗಿದೆ. ಇದರಿಂದ ಶಿಕ್ಷಕರ ಕೊರತೆಗೂ ತಾತ್ಕಾಲಿಕ ಪರಿಹಾರ ದೊರೆಯಲಿದೆ’
-ತನ್ವೀರ್ ಸೇಠ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ







