ದ್ವಿಭಾಷಾ ಸಾಹಿತಿ ಎಂ.ಜಾನಕಿ ಬ್ರಹ್ಮಾವರವರಿಗೆ ವಿಶುಕುಮಾರ್ ಪ್ರಶಸ್ತಿ

ಮಂಳೂರು, ಜು. 21: ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು, ವಿಶುಕುಮಾರ್ ದತ್ತಿನಿಧಿ ಸಂಚಾಲನಾ ಸಮಿತಿ ಮೂಲಕ ಕೊಡಮಾಡುವ 2016ನೆ ಸಾಲಿನ ವಿಶುಕುಮಾರ್ ಪ್ರಶಸ್ತಿಗೆ ಕನ್ನಡ ಮತ್ತು ತುಳು ಭಾಷೆಯಲ್ಲಿ ತಮ್ಮ ಚಾತುರ್ಯವನ್ನು ಮೆರೆಸಿದ ಮೇರು ಸಾಹಿತಿಗಳಲ್ಲಿ ಒಬ್ಬರಾದ ಎಂ.ಜಾನಕಿ ಬ್ರಹ್ಮಾವರ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 31ರಂದು ಮಧ್ಯಾಹ್ನ 2:30ಕ್ಕೆ ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ನಡೆಯಲಿದೆ. ಪ್ರಶಸ್ತಿಯನ್ನು ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಪ್ರದಾನ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲೆಯ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಮತ್ತು ಸಾಹಿತಿ ಡಾ.ಮಾಧವಿ ಭಂಡಾರಿ ಹಾಗೂ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇದರ ಅಧ್ಯಕ್ಷ ಸಂಪತ್ ಬಿ. ಸುವರ್ಣ ಭಾಗವಹಿಸಲಿದ್ದಾರೆ ಎಂದು ವಿಶುಕುಮಾರ್ ದತ್ತಿನಿಧಿ ಸಂಚಲನ ಸಮಿತಿಯ ಸಂಚಾಲಕ ಕಿಶೋರ್ ಕೆ. ಬಿಜೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





