ಎಮ್‌ಎಚ್370 ವಿಮಾನದ ಅವಶೇಷಗಳಿಗಾಗಿ ಶೋಧ - ತಪ್ಪು ಸ್ಥಳದಲ್ಲಿ ಹುಡುಕಿದೆವು: ಶೋಧ ತಂಡ
ವಿಮಾನವನ್ನು ಇಳಿಮುಖವಾಗಿ ನಿಧಾನವಾಗಿ ಚಲಾಯಿಸಲಾಗಿತ್ತೇ?

ಸಿಡ್ನಿ, ಜು. 21: ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನ ಅಂತಿಮ ಕ್ಷಣಗಳಲ್ಲಿ ಸಮುದ್ರಕ್ಕೆ ನೇರವಾಗಿ ಅಪ್ಪಳಿಸುವ ಬದಲು ಇಳಿಯುತ್ತಾ ಬಂದಿರುವ ಸಾಧ್ಯತೆಯಿದೆ ಎಂದು ವಿಮಾನದ ಅವಶೇಷಗಳಿಗಾಗಿ ಸಮುದ್ರದಡಿಯಲ್ಲಿ ಶೋಧ ನಡೆಸುತ್ತಿರುವ ಡಚ್ ಕಂಪೆನಿಯೊಂದರ ಉನ್ನತ ಶೋಧ ಅಧಿಕಾರಿಗಳು ಭಾವಿಸಿದ್ದಾರೆ.
ಅಂದರೆ, ವಿಮಾನದ ಅವಶೇಷಗಳಿಗಾಗಿ ಸಾಗರದ ತಪ್ಪು ಭಾಗದಲ್ಲಿ ತಾವು ಎರಡು ವರ್ಷಗಳಿಂದ ಶೋಧ ನಡೆಸಿರುವುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.
2014 ಮಾರ್ಚ್ 8ರಂದು ರಾತ್ರಿ ಕೌಲಾಲಂಪುರದಿಂದ ಬೀಜಿಂಗ್‌ಗೆ 239 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಎಂಎಚ್370 ವಿಮಾನ ನಿಗೂಢವಾಗಿ ನಾಪತ್ತೆಯಾಗಿತ್ತು.
ಇಂಜಿನಿಯರಿಂಗ್ ಕಂಪೆನಿ ಫುಗ್ರೊ ನೇತೃತ್ವದಲ್ಲಿ ಶೋಧಕರು ಸುಮಾರು ಗ್ರೀಸ್‌ನ ಭೂಭಾಗದಷ್ಟು ಪ್ರದೇಶವನ್ನು ಸಮುದ್ರದಲ್ಲಿ ಎರಡು ವರ್ಷಗಳಿಂದ ಜಾಲಾಡುತ್ತಿದ್ದಾರೆ.
ಪಶ್ಚಿಮ ಆಸ್ಟ್ರೇಲಿಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಹಿಂದೂ ಮಹಾ ಸಾಗರದಲ್ಲಿ 1.20 ಲಕ್ಷ ಚದರ ಕಿಲೋಮೀಟರ್‌ಗಿಂತಲು ಹೆಚ್ಚಿನ ಪ್ರದೇಶದಲ್ಲಿ ಶೋಧ ನಡೆಸಲಾಗುತ್ತಿದ್ದು ಇನ್ನು ಮೂರು ತಿಂಗಳಲ್ಲಿ ಅದು ಕೊನೆಗೊಳ್ಳಲಿದೆ.
ಆ ಬಳಿಕ, ಶೋಧ ಕಾರ್ಯಾಚರಣೆಯನ್ನು ನಿಲ್ಲಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಪ್ರಮುಖ ದೇಶಗಳಾದ ಮಲೇಶ್ಯ, ಚೀನಾ ಮತ್ತು ಆಸ್ಟ್ರೇಲಿಯಗಳು ಶುಕ್ರವಾರ ಸಭೆ ನಡೆಸಲಿವೆ. ಈವರೆಗೆ ನಾಪತ್ತೆಯಾಗಿರುವ ವಿಮಾನಕ್ಕೆ ಸಂಬಂಧಿಸಿದ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.
‘‘ಅವಶೇಷಗಳು ಅಲ್ಲಿಲ್ಲ. ಅಂದರೆ, ಅವು ಬೇರೆಲ್ಲೋ ಇವೆ’’ ಎಂದು ಫುಗ್ರೊ ಯೋಜನಾ ನಿರ್ದೇಶಕ ಪೌಲ್ ಕೆನಡಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.
ಪೈಲಟ್‌ನ ನಿಯಂತ್ರಣದಲ್ಲೇ ಇತ್ತೇ?
ಗುರುತಿಸಲಾದ ವಲಯದಲ್ಲಿ ಅವಶೇಷಗಳು ಪತ್ತೆಯಾಗದಿರಲು ಕೆಲವು ತರ್ಕಕ್ಕೆ ಮೀರಿದ ಕಾರಣಗಳು ಇರಬಹುದಾದರೂ, ವಿಮಾನವನ್ನು ನಿಧಾನವಾಗಿ ಇಳಿಸಿರುವ ಸಾಧ್ಯತೆ ಹೆಚ್ಚು ಪ್ರಸ್ತುತವೆನಿಸುತ್ತದೆ ಎಂದು ಕೆನಡಿ ಮತ್ತು ಅವರ ತಂಡ ಭಾವಿಸುತ್ತದೆ. ಅಂದರೆ, ವಿಮಾನವನ್ನು ಕೊನೆಯ ಹಂತದಲ್ಲಿ ನಿಧಾನವಾಗಿ ಇಳಿಸಲಾಗಿದೆ. ಅಂದರೆ, ಕೊನೆಯ ಹಂತದಲ್ಲೂ ವಿಮಾನ ಪೈಲಟ್‌ನ ನಿಯಂತ್ರಣದಲ್ಲಿತ್ತು ಎಂಬುದಾಗಿ ಭಾವಿಸಬಹುದಾಗಿದೆ.
ಹಾಗಾಗಿದ್ದರೆ, ಉಪಗ್ರಹ ಚಿತ್ರಗಳ ಆಧಾರದಲ್ಲಿ ಮಾಡಲಾದ ಲೆಕ್ಕಾಚಾರದಂತೆ ಗುರುತಿಸಲಾದ ಪ್ರದೇಶವನ್ನು ಮೀರಿ ವಿಮಾನ ಸಾಗಿರುವ ಸಾಧ್ಯತೆಯಿದೆ.
‘‘ವಿಮಾನ ಪೈಲಟ್‌ನ ನಿಯಂತ್ರಣದಲ್ಲಿದ್ದರೆ ಅದು ತುಂಬಾ ದೂರ ಹಾರಬಹುದು’’ ಎಂದು ಕೆನಡಿ ನುಡಿದರು.
‘‘ವಿಮಾನ ಪೈಲಟ್‌ನ ನಿಯಂತ್ರಣದಲ್ಲೇ ಇದ್ದರೆ ನಮ್ಮ ಶೋಧ ಪ್ರದೇಶದ ವ್ಯಾಪ್ತಿಯನ್ನೂ ಮೀರಿ ವಿಮಾನ ಹಾರಬಹುದಾಗಿದೆ’’ ಎಂದು ಅಭಿಪ್ರಯಪಟ್ಟರು.







