ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಕುಟುಂಬದ ಜವಾಬ್ದಾರಿ ನಿಭಾಯಿಸಿ : ನ್ಯಾ. ಬಿ.ಸಿ.ಚಂದ್ರಶೇಖರ್
ವಿಶ್ವ ಮಾನಸಿಕ ಅಸ್ವಸ್ಥರ ದಿನಾಚರಣೆ, ಕಾನೂನು ಅರಿವು ಕಾರ್ಯಾಗಾರ

ಶಿಕಾರಿಪುರ, ಜು.21: ಕಾಯಿಲೆಗಳಿಂದ ಬಳಲುವ ವ್ಯಕ್ತಿ ಸಂಕೋಚಪಡದೆ ವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯ ಭಾಗ್ಯದಿಂದ ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ಇಲ್ಲಿನ ಜೆಎಂಎ್ಸಿ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ.ಸಿ ಚಂದ್ರಶೇಖರ್ ಸಲಹೆ ನೀಡಿದರು.
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಅಸ್ವಸ್ಥರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಣ, ಆಸ್ತಿಯಿಂದ ವ್ಯಕ್ತಿ ಮಾನಸಿಕ ನೆಮ್ಮದಿಯನ್ನು ಹೊಂದುವುದು ಅಸಾಧ್ಯ ಎಂದ ಅವರು, ಸದೃಢ ಆರೋಗ್ಯ ಎಲ್ಲ ಆಸ್ತಿಗಳಿಗಿಂತ ಅತ್ಯಂತ ಪ್ರಮುಖವಾಗಿದೆ ಎಂದರು.
ಮಾನಸಿಕ ಅಸ್ವಸ್ಥರನ್ನು ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆಯ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಪ್ರೋತ್ಸಾಹಿಸಬೇಕಾಗಿದೆ ಎಂದ ಅವರು, ಕಾಯಿಲೆಗಳು ಸಾಮಾನ್ಯವಾಗಿದ್ದು ಪೂರಕವಾಗಿ ಸರ್ವ ರೋಗಕ್ಕೂ ಚಿಕಿತ್ಸೆ ಲಭ್ಯವಿದೆ. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕಾಗಿದೆ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಾರೂಕ್ ಝಾರೆ ಮಾತನಾಡಿ, ಮನೋರೋಗಿಗಳು ಸಮಾಜಕ್ಕೆ ಬಹು ದೊಡ್ಡ ಸಮಸ್ಯೆಯಾಗಿದ್ದು, ಮಾನಸಿಕ ಸಮಸ್ಯೆಯ ನಿರ್ಮೂಲನೆಗೆ ಸರಕಾರದಿಂದ ದೊರೆಯುವ ಚಿಕಿತ್ಸೆ ರೋಗಿಗಳಿಗೆ ಪ್ರಾಮಾಣಿಕವಾಗಿ ದೊರೆಯಬೇಕಾಗಿದೆ ಎಂದ ಅವರು, ಸ್ವಾಸ್ಥ ಸಮಾಜ ನಿರ್ಮಾಣದಲ್ಲಿ ವೈದ್ಯರ ಜತೆಗೆ ಜನತೆಯು ಪೂರಕವಾಗಿ ಸಹಕರಿಸುವಂತೆ ತಿಳಿಸಿದರು.
ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಮನೋವೈದ್ಯ ಡಾ.ಸಂಜಯ್ ಮಾನಸಿಕ ಕಾಯಿಲೆ ಹಾಗೂ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದುಷ್ಯಂತ್, ತಾ. ವೈದ್ಯಾಧಿಕಾರಿ ಡಾ. ಮಂಜುನಾಥ ನಾಗಲೀಕರ್, ಎಪಿಪಿ ದಾದಾಪೀರ್ ಭಾನುವಳ್ಳಿ, ತಾ.ವಕೀಲರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ಹಿರಿಯ ನ್ಯಾಯವಾದಿ ಶಿವನಗೌಡ, ಕೊಟ್ರೇಶಪ್ಪ, ದೇವರಾಜ್, ಯೋಗಾನಂದ, ವಿನಯ್, ಡಾ.ಶ್ರೀನಿವಾಸ್, ಡಾ.ಸದಾನಂದಪೈ, ಅನಸೂಯಮ್ಮ, ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ ಪೂಜಾರ್, ಶಾರದಮ್ಮ, ಆರೋಗ್ಯ ಸಹಾಯಕ ಎನ್.ವಿ ಸುರೇಶ ಮತ್ತಿತರರು ಉಪಸ್ಥಿತರಿದ್ದರು.







