ಶಂಕಿತ ನಕ್ಸಲ್ ರೂಪೇಶ್ ನ್ಯಾಯಾಲಯಕ್ಕೆ ಹಾಜರು

ಮಡಿಕೇರಿ, ಜು.21: ಕರ್ನಾಟಕದ ಕೊಡಗು ಸೇರಿದಂತೆ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ ಆರೋಪವನ್ನು ಎದುರಿಸುತ್ತಿರುವ ಶಂಕಿತ ಮಾವೋವಾದಿ ನಕ್ಸಲ್ ನಾಯಕ ರೂಪೇಶ್‌ನನ್ನು ಜು.21ರಂದು ಮಡಿಕೇರಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕೇರಳದಲ್ಲಿ ನಡೆದಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಹಾಗೂ ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೊಯಮತ್ತೂರಿನಲ್ಲಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. 2013ರಲ್ಲಿ ದಕ್ಷಿಣ ಕೊಡಗಿನ ಬಿರುನಾಣಿ ಸಮೀಪದ ಪರಕಟಗೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ರೂಪೇಶ್ ತಂಡ ಕೆಲವು ಮನೆಗಳಿಗೆ ಭೇಟಿ ನೀಡಿ ಆಹಾರ ಪದಾರ್ಥ ಸಂಗ್ರಹಿಸಿಕೊಂಡು ಕರ ಪತ್ರಗಳನ್ನು ಬಿಟ್ಟು ಹೋಗಿದ್ದರು. ಇಂದು ರೂಪೇಶ್‌ನನ್ನು ವಿಚಾರಣೆಗಾಗಿ ಮಡಿಕೇರಿಗೆ ಕರೆತಂದು ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ಸಿಸಿ ನಂ.119/16 ರಡಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಯಿತು. ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀಕಾಂತ್ ಪ್ರಕರಣದ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಿದರು. ನಂತರ ಸುರಕ್ಷತೆಯ ದೃಷ್ಟಿಯಿಂದ ಜು.21ರಂದು ಮಡಿಕೇರಿಯ ಕಾರಾಗೃಹದಲ್ಲೇ ರೂಪೇಶ್‌ನನ್ನು ಉಳಿಸಿಕೊಳ್ಳುವ ಕುರಿತು ಪೊಲೀಸರು ಮಾಡಿದ ಕೋರಿಕೆ ಮೇರೆಗೆ ನ್ಯಾಯಾಲಯ ಅನುಮತಿ ನೀಡಿತು. ಪೊಲೀಸರು ನ್ಯಾಯಾಲಯದ ಆವರಣಕ್ಕೆ ಕರೆ ತರುತ್ತಿದ್ದಂತೆ ರೂಪೇಶ್ ನಕ್ಸಲ್ ಪರ ಘೋಷಣೆಗಳನ್ನು ಕೂಗಿದ ಪ್ರಸಂಗವೂ ನಡೆಯಿತು.





