ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಮೂರು ತಿಂಗಳಾದರೂ ಸಿಗದ ವೇತನ
.jpg)
ಸಾಗರ,ಜು.21: ದಿನಗೂಲಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾಗರದ ಉಪವಿಭಾಗೀಯ ಆಸ್ಪತ್ರೆಯ ಎದುರು ಗುರುವಾರ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನೌಕರರ ಪ್ರಮುಖರಾದ ಯೋಗೀಶ್, ಕಳೆದ ಏಳು ವರ್ಷಗಳಿಂದ ಉಪವಿಭಾ ಗೀಯ ಆಸ್ಪತ್ರೆಯಲ್ಲಿ ಕಂಪ್ಯೂಟರ್ ಆಪರೇಟರ್, ಸೆಕ್ಯುರಿಟಿ, ಗ್ರೂಪ್ ಡಿ, ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರ ಬೇಡಿಕೆಗೆ ಸ್ಪಂದಿಸುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಜೀವನಭದ್ರತೆ ಇಲ್ಲದೆ ದುಡಿಯುವ ದಿನಗೂಲಿ ನೌಕರರನ್ನು ಜೀತದಾಳುಗಳಿಗಿಂತ ಕೇವಲವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಬೆಂಗಳೂರಿನ ಐಶ್ವರ್ಯ ಸ್ಪೆಷಾಲಿಟಿ ಸರ್ವೀಸ್ ಹಾಗೂ ಹಾವೇರಿಯ ಬ್ಲ್ಯೂಮನೆ ಎಂಟರ್‌ಪ್ರೈಸಸ್‌ನವರು ಆಸ್ಪತ್ರೆಗೆ ಗುತ್ತಿಗೆ ಕಾರ್ಮಿಕರನ್ನು ಒದಗಿಸಿದ್ದಾರೆ. ದಿನದ 8 ಗಂಟೆ ಕೆಲಸ ಮಾಡುವ ನಿಯಮವಿದ್ದರೂ, ನಮ್ಮನ್ನು 12ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತಿದೆ. ಆದರೆ ಸಂಬಳ ಮಾತ್ರ 8 ಗಂಟೆಯಂತೆ ನೀಡಲಾಗುತ್ತಿದೆ. ಸಂಬಳ ಸಹ ನಿಗದಿತ ದಿನಾಂಕಕ್ಕೆ ಕೊಡುತ್ತಿಲ್ಲ. ಪಿ.ಎಫ್. ಸೇರಿದಂತೆ ಇತರ ಯಾವ ಸವಲತ್ತುಗಳನ್ನೂ ದಿನಗೂಲಿ ನೌಕರರಿಗೆ ಕೊಡುತ್ತಿಲ್ಲ ಎಂದು ದೂರಿದರು.
ಕಳೆದ ಮೂರು ತಿಂಗಳಿನಿಂದ ದಿನಗೂಲಿ ನೌಕರರಿಗೆ ವೇತನ ನೀಡಿಲ್ಲ. ಇದರಿಂದ ನಮಗೆ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಈ ಬಗ್ಗೆ ಗುತ್ತಿಗೆದಾರ ಕಂಪೆನಿಯನ್ನು ಕೇಳಿದರೆ ಸಬೂಬು ಹೇಳುತ್ತಿದ್ದಾರೆ. ಹೆಸರಿಗೆ ದಿನಗೂಲಿ ನೌಕರರಾದರೂ ಆಸ್ಪತ್ರೆಯ ಬಹುತೇಕ ಕೆಲಸವನ್ನು ನಮ್ಮಿಂದ ಮಾಡಿಸಲಾಗುತ್ತಿದೆ. ಆದರೆ ದುಡಿಮೆಗೆ ತಕ್ಕ ಸಂಬಳವನ್ನು ಮಾತ್ರ ನೀಡುತ್ತಿಲ್ಲ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ದಿನಗೂಲಿ ನೌಕರರಾದ ಕುಮಾರ್, ಶ್ರೀಕಾಂತ್, ಯುವರಾಜ್, ಪಾರ್ವತಮ್ಮ, ಮಧುಸೂದನ್, ಪಂಕಜಮ್ಮ, ಮೋಹನ್, ಸಂತೋಷ್, ಶಶಿಕಲಾ, ದೇವಯ್ಯ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.







