‘ಆರೋಪಿಗಳ ಬಂಧನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ’

ಸೊರಬ, ಜು.21: ಸೊರಬ ಪಟ್ಟಣದೊಳಗೆ ಯಾವುದೇ ಅಪರಾಧಿಗಳು ನುಸುಳದಂತೆ ನಾಕಾಬಂದಿ ಹಾಕಲಾಗಿದೆ. ಪಟ್ಟಣದೊಳಗೆ ಬಂದು ಹೋಗುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದು ಶಿಕಾರಿಪುರ ಡಿವೈಎಸ್ಪಿ ಸುಧಾಕರ್ ನಾಯ್ಕ್ಕಿ ತಿಳಿಸಿದರು.
ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರೊಂದಿಗೆ ಸೌಹಾರ್ದ ಭೇಟಿ ನೀಡಿ, ಮಾತನಾಡಿದರು.
ಅಪರಾಧಿಗಳು ಯಾವುದೇ ಜಿಲ್ಲೆಗಳಿಂದ ತಾಲೂಕಿನೊಳಗೆ ಬರದಂತೆ ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ನಡೆಸಲಾಗುತ್ತಿದೆ. ಸಾಮಾನ್ಯವಾಗಿ ನ್ಯಾಯಾಲಯ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡು ತಿರುಗುತ್ತಿರುವವರೇ ಇಂತಹ ಪ್ರಕರಣಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹಾಗೂ ನಮ್ಮ ಜಿಲ್ಲೆಯಲ್ಲಿನ ಎಲ್ಲಾ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿ ತಪ್ಪಿಸಿಕೊಂಡು ತಿರುಗುತ್ತಿರುವವರ ಬಗ್ಗೆ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಜಿಲ್ಲಾ ವರಿಷ್ಠಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಗಸ್ತು ಕಾರ್ಯವನ್ನು ಬಿಗಿಗೊಳಿಸಲಾಗಿದೆ. ಈವರೆಗೆ ರಾತ್ರಿ ಪಾಳಿಯಲ್ಲಿ ಗಸ್ತು ಕಾರ್ಯಕ್ಕೆ ಇಬ್ಬರು ಸಿಬ್ಬಂದಿಯ ಎರಡು ಟೀಮ್‌ಗಳು ಕಾರ್ಯನಿರ್ವಹಿಸುತ್ತಿತ್ತು. ಹೆಚ್ಚುವರಿ ಮತ್ತೊಂದು ಟೀಮ್‌ನ್ನು ಬಳಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಪಟ್ಟಣದಲ್ಲಿನ ಉತ್ಸಾಹಿ ಯುವಕರು ಅಪರಾಧಗಳನ್ನು ತಡೆಯಲು ರಾತ್ರಿ ಪಾಳಿಯ ಗಸ್ತಿನಲ್ಲಿ ಪಾಲ್ಗೊಳ್ಳಲು ಸ್ವ ಇಚ್ಛೆಯಿಂದ ಮುಂದೆ ಬಂದಲ್ಲಿ ಅಂತವರು ಸ್ಥಳೀಯ ಠಾಣೆಯ ಅಧಿಕಾರಿಗಳಿಗೆ ತಮ್ಮ ವ್ಯಕ್ತಿಗತ ಮಾಹಿತಿ ಸಲ್ಲಿಸಿ ಬೀಟ್‌ನಲ್ಲಿ ಪಾಲ್ಗೊಳ್ಳಬಹುದು. ಸಿಬ್ಬಂದಿಯ ಕೊರತೆ ಇದ್ದು, ಆದರೂ ಇರುವ ಸಿಬ್ಬಂದಿಯನ್ನೇ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ಪ್ರಯತ್ನ ಮಾಡಲಾಗುವುದು. ತಾನು ಕೂಡಾ ಹೊಸದಾಗಿ ವರ್ಗಾವಣೆಗೊಂಡು ಬಂದಿದ್ದು, ತಾಲೂಕಿನ ಎಲ್ಲಾ ಭೌಗೋಳಿಕ ಮಾಹಿತಿ ಹಾಗೂ ಅಪರಾಧಿಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದೇನೆ. ಸಾಮಾನ್ಯವಾಗಿ ಜುಲೈ, ಆಗಸ್ಟ್ ತಿಂಗಳಿನಲ್ಲಿ ರಾಜ್ಯದ ಎಲ್ಲಾ ಭಾಗಗಳಲ್ಲೂ ಕಳ್ಳತನ ನಡೆದ ಪ್ರಕರಣಗಳು ಹೆಚ್ಚು. ಈಗಾಗಲೇ ಸರಣಿಗಳ್ಳರ ಬಗ್ಗೆ ಕೆಲವು ಮಾಹಿತಿಗಳು ದೊರೆತ್ತಿದ್ದು, ಅವುಗಳನ್ನು ತನಿಖೆಗೆ ತೊಂದರೆ ಆಗುವ ದೃಷ್ಟಿಯಿಂದ ಬಹಿರಂಗ ಪಡಿಸುವುದಿಲ್ಲ. ಆದರೂ ಶೀಘ್ರದಲ್ಲೇ ಸರಣಿ ಕಳ್ಳರನ್ನು ಬಂಧಿಸುವ ವಿಶ್ವಾಸ ಪಡಿಸಿ, ಕಳ್ಳರ ಬಂಧನಕ್ಕೆ ಸಾರ್ವಜನಿಕರ ಸಹಕಾರ ಕೋರಿದರು.
ಸಿಪಿಐ ಗಣೇಶಪ್ಪ, ಪಿಎಸ್ಸೈ ಅರ್ಜುನ್ ಲಿಂಗಾರೆಡ್ಡಿ ಉಪಸ್ಥಿತರಿದ್ದರು.





