ಪ್ರತೀ ಗ್ರಾಮಗಳಲ್ಲಿ ಹಾಲಿನ ಕೇಂದ್ರ ತೆರೆಯುವ ಗುರಿ

ಸೊರಬ, ಜು.21: ತಾಲೂಕಿನಲ್ಲಿ 50 ಹಾಲು ಉತ್ಪಾದಕ ಸಂಘಗಳಿದ್ದು, 75 ಸಂಘಗಳ ನೋಂದಾವಣೆ ಮಾಡಿಕೊಳ್ಳಲಾಗಿದೆ. 6 ಸಂಘಗಳು ಪ್ರಾರಂಭದ ಹಂತದಲ್ಲಿವೆ. ಈಗಾಗಲೇ 14 ಗ್ರಾಮಗಳಲ್ಲಿ ಹಾಲು ಉತ್ಪಾದಕ ಸಂಘಗಳನ್ನು ಸ್ಥಾಪನೆ ಮಾಡಲು ಗ್ರಾಮ ಸಭೆೆಗಳನ್ನು ಕರೆದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀಪಾದ ಹೆಗಡೆ ನಿಸರಾಣಿ ತಿಳಿಸಿದ್ದಾರೆ.
ಪಟ್ಟಣದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪನೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಯಶಸ್ವಿನಿ ಕಾರ್ಡ್ ವಿತರಿಸಿ ಅವರು ಮಾತನಾಡಿದರು.
ಪ್ರತೀ ಹಳ್ಳಿಗಳಲ್ಲಿ ಹಾಲು ಉತ್ಪಾದಕ ಸಂಘಗಳನ್ನು ಸ್ಥಾಪಿಸುವ ಮೂಲಕ ತಾಲೂಕಿನಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಪ್ರತಿದಿನ 18,000 ಲೀ. ಹಾಲು ಸಂಗ್ರಹವಾಗುತ್ತಿದ್ದು, ಇನ್ನೂ ಹೆಚ್ಚಳ ಮಾಡುವ ಉದ್ದೇಶದಿಂದ ಪ್ರತೀ ಗ್ರಾಮಗಳಲ್ಲಿ ಹಾಲಿನ ಕೇಂದ್ರಗಳನ್ನು ತೆರೆದು ಹಾಲು ಉತ್ಪಾದನೆಗೆ ಉತ್ತೇಜನ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸಂಘ ಪ್ರತೀ ಗ್ರಾಮಗಳಿಗೆ ಭೇಟಿ ನೀಡಿ ಹಾಲು ಉತ್ಪಾದನೆ ಬಗ್ಗೆ ರೈತರಲ್ಲಿ ಮನವರಿಕೆ ಮಾಡಿಕೊಡುತ್ತಿದೆ. ಈಗಾಗಲೇ 2 ಬಿಎಂಸಿ ಕೇಂದ್ರಗಳು ಚಾಲ್ತಿಯಲ್ಲಿದ್ದು, ಉದ್ರಿ ಮತ್ತು ಗಂಗೊಳ್ಳಿಯಲ್ಲಿ ಪ್ರಾರಂಭದ ಹಂತದಲ್ಲಿವೆ. ಸಂಘದ ಕಟ್ಟಡಕ್ಕಾಗಿ ಕೆಎಂಎಫ್ ವತಿಯಿಂದ 2 ಲಕ್ಷ ರೂ., ಶಿಮುಲ್‌ನಿಂದ 50 ಸಾವಿರ ರೂ., ಎಸ್‌ಕೆಡಿಆರ್‌ಡಿಪಿ ವತಿಯಿಂದ 50 ಸಾವಿರ ರೂ. ಸಹಾಯಧನ ಲಭ್ಯವಿದೆ ಎಂದು ಮಾಹಿತಿ ನೀಡಿದರು. ಯಶಸ್ವಿನಿ ಯೋಜನೆಗೆ 300 ರೂ. ಶುಲ್ಕವಿದ್ದು, ಸಂಘದ ಸದಸ್ಯರು 260 ರೂ. ಪಾವತಿಸಿದರೆ ಶಿಮುಲ್ 40 ರೂ. ವಂತಿಕೆ ನೀಡುತ್ತದೆ. ಉಳಿದವರು 300 ರೂ. ಪಾವತಿಸಬೇಕು. ಈ ತಿಂಗಳ 31 ಕೊನೆಯ ದಿನವಾಗಿದ್ದು, ಪ್ರತಿಯೊಬ್ಬರೂ ಯಶಸ್ವಿನಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಶಿಮುಲ್ ವಿಸ್ತರಣಾಧಿಕಾರಿ ಮಂಜುನಾಥ ಎಚ್.ಎಂ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ, ಕ್ಷೇತ್ರಾಧಿಕಾರಿ ಸಂತೋಷಕುಮಾರ್, ಪಶುವೈದ್ಯ ಡಾ.ಬ್ರಹ್ಮಲಿಂಗ ಮತ್ತಿತರರು ಉಪಸ್ಥಿತರಿದ್ದರು.







