ಮಹಿಳೆ ಶೋಷಣೆಮುಕ್ತಳಾಗಿಲ್ಲ: ಕವಿತಾ ಲಿಂಗರಾಜು

ಚಿಕ್ಕಮಗಳೂರು, ಜು.21: ಮಹಿಳೆ ಎಲ್ಲ ರಂಗಗಳಲ್ಲೂ ಛಾಪು ಮೂಡಿಸಿದ್ದರೂ ಶೋಷಣೆಯಿಂದ ಮುಕ್ತಳಾಗಿಲ್ಲ ಎಂದು ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಲಿಂಗಾರಾಜು ಅಭಿಪ್ರಾಯಿಸಿದ್ದಾರೆ. ಅಕ್ಕಮಹಾದೇವಿ ಮಹಿಳಾಸಂಘದ 8ನೆ ವರ್ಷದ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆಯನ್ನು ನಿನ್ನೆ ಶ್ರೀ ಜಗದ್ಗುರು ರೇಣುಕಾಸಮುದಾಯ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ಕುಟುಂಬಕ್ಕಷ್ಟೆ ಸೀಮಿತವಾಗದೆ ಸಾಮಾ ಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಶೇ.35ರಷ್ಟು ಆಡಳಿತದಲ್ಲಿ ಮೀಸಲಾತಿ ಪಡೆದು ರಾಜಕೀಯಕ್ಷೇತ್ರದಲ್ಲೂ ಗಣನೀಯ ಅಧಿಕಾರ ಗಳಿಸಿದ್ದರೂ, ಒಂದಿಲ್ಲೊಂದು ರೀತಿಯ ತೊಂದರೆ ಅನುಭವಿಸುತ್ತಲೇ ಇದ್ದಾಳೆ. ದೌರ್ಜನ್ಯ, ಅತ್ಯಾಚಾರದಂತಹ ಪಿಡುಗಿನಿಂದ ಮುಕ್ತಗೊಂಡಿಲ್ಲ ಎಂದ ಕವಿತಾ, ಧೈರ್ಯ, ಸ್ಥೈರ್ಯ ಮತ್ತು ಸಂಘಟನೆಯಿಂದ ಇವನ್ನೆಲ್ಲ ಮೆಟ್ಟಿನಿಲ್ಲಬೇಕಾಗಿದೆ ಎಂದವರು ಕರೆ ನೀಡಿದರು. ಪುರುಷರಿಗಿಂತ ಮಹಿಳೆಯರಲ್ಲಿ ಪ್ರಕೃತಿದತ್ತವಾಗಿಯೆ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಅಧಿಕವಾಗಿರುತ್ತದೆ. ಇತ್ತೀಚಿನ ಡಿವೈಎಸ್ಪಿಗಳ ಆತ್ಮಹತ್ಯೆ ಪ್ರಕರಣ ಪ್ರಸ್ತಾಪಿಸಿ ಅನುಪಮಾ ಶೆಣೈ ಕೆಲಸ ತೊರೆದರೇ ಹೊರತು ಜೀವಹಾನಿಗೆ ಮುಂದಾಗಲಿಲ್ಲವೆಂದು ಉದಾಹರಿಸಿದರು.
ತಾಪಂ ಸದಸ್ಯೆ ಮುಗುಳವಳ್ಳಿಯ ಪುಷ್ಪಾಸೋಮಶೇಖರ್ ಮಾತನಾಡಿ, ವಿವಿಧ ಸ್ಥರ- ಪ್ರದೇಶದ ಹೆಣ್ಣುಮಕ್ಕಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ಕಲ್ಪಿಸಿರುವುದು ಮಾದರಿ ಎಂದ ಅವರು, ಇಲ್ಲಿಯ ಸದಸ್ಯೆಯಾಗಿ ಪಡೆದ ಅನುಭವ ಟಿಪಿಎಸ್ ಕಾರ್ಯ ನಿರ್ವಹಣೆಯಲ್ಲಿ ತಮಗೆ ಸಹಕಾರಿಯಾಗುತ್ತಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಮಾತನಾಡಿ, ಮೌಲ್ಯಯುತವಾದ ನೈತಿಕ ತಳಹದಿಯ ಬದುಕು ನಮ್ಮದಾಗಬೇಕು. ಆರೋಗ್ಯವೇ ಭಾಗ್ಯ. ಸ್ವಚ್ಛತೆಯ ಬಗ್ಗೆ ಕಾಳಜಿವಹಿಸಬೇಕು. ಬೆಳೆಯುವ ಮಕ್ಕಳಲ್ಲಿ ಪರಂಪರೆ, ಸಂಸ್ಕಾರದ ಬಗ್ಗೆ ಮಹಿಳೆಯರು ಅರಿವು ಮೂಡಿಸಿದರೆ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ ಎಂದರು.







