ಎನ್‌ಜಿಒಗಳ ಆಸ್ತಿ ವಿವರ ಘೋಷಣೆಗೆ ಅಂತಿಮ ಗಡುವು ವಿಸ್ತರಣೆಗೆ ಒಪ್ಪಿಗೆ
ಹೊಸದಿಲ್ಲಿ,ಜು.21: ನಿರ್ದಿಷ್ಟ ವರ್ಗದ ಎನ್‌ಜಿಒಗಳ ಟ್ರಸ್ಟಿಗಳು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಲು ವಿಧಿಸಲಾಗಿದ್ದ ಜುಲೈ 31ರ ಗಡುವನ್ನು ವಿಸ್ತರಿಸಬೇಕೆಂಬ ಕೆಲವು ರಾಜ್ಯಸಭಾ ಸದಸ್ಯರ ಬೇಡಿಕೆಯನ್ನು ಸರಕಾರವು ಗುರುವಾರ ಒಪ್ಪಿಕೊಂಡಿದೆ.
ವಿಷಯವನ್ನು ಪ್ರಸ್ತಾಪಿಸಿದ ನಾಮ ನಿರ್ದೇಶಿತ ಸದಸ್ಯೆ ಅನು ಆಗಾ ಅವರು,10 ಲ.ರೂ. ಮತ್ತು ಅದಕ್ಕೂ ಹೆಚ್ಚಿನ ವಿದೇಶಿ ದೇಣಿಗೆ ಮತ್ತು ಒಂದು ಕೋ.ರೂ.ಗೂ ಹೆಚ್ಚಿನ ಸರಕಾರಿ ಅನುದಾನಗಳನ್ನು ಸ್ವೀಕರಿಸುವ ಎನ್‌ಜಿಒಗಳ ಟ್ರಸ್ಟಿಗಳು ಮತ್ತು ಹಿರಿಯ ಪದಾಧಿಕಾರಿಗಳು 2013ರ ಲೋಕಪಾಲ ಕಾಯ್ದೆಯ ವ್ಯಾಪ್ತಿಯಲ್ಲಿ ಬರುತ್ತಾರೆ. ಈ ಎಲ್ಲ ಟ್ರಸ್ಟಿಗಳು ಮತ್ತು ಪದಾಧಿಕಾರಿಗಳು ತಮ್ಮ,ತಮ್ಮ ಜೀವನ ಸಂಗಾತಿಯ ಮತ್ತು ಅವಲಂಬಿತ ಮಕ್ಕಳ ಆಸ್ತಿಗಳು ಮತ್ತು ಹೊಣೆಗಾರಿಕೆಗಳನ್ನು ಬಹಿರಂಗಗೊಳಿಸುವುದು ಅಗತ್ಯವಾಗಿದೆ. ಇತ್ತೀಚಿನ ಅಧಿಸೂಚನೆಯಂತೆ ಇದಕ್ಕೆ ಜು.31 ಕೊನೆಯ ದಿನವಾಗಿದ್ದು, ತಪ್ಪಿದಲ್ಲಿ ಅವರ ಆಸ್ತಿಗಳನ್ನು ಭ್ರಷ್ಟಾಚಾರದ ಮೂಲಕ ಗಳಿಸಿದ್ದು ಎಂದು ಪರಿಗಣಿಸಲಾಗುತ್ತದೆ ಮತ್ತು ಅವರ ವಿರುದ್ಧ ದಂಡನಾ ಕ್ರಮವನ್ನು ಜರುಗಿಸಲಾಗುತ್ತದೆ ಎಂದು ವಿವರಿಸಿದರು.
ಈ ಟ್ರಸ್ಟಿಗಳು ಸರಕಾರಿ ನೌಕರರಲ್ಲ. ಅವರು ನೀಡುವ ಮಾಹಿತಿ ಜನಸಾಮಾನ್ಯರಿಗೆ ಲಭ್ಯವಾಗುವುದರಿಂದ ತಮಗೆ ಕಿರುಕುಳವಾಗಬಹದು ಎಂಬ ಭೀತಿ ಅವರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವರು ತಮ್ಮ ಹುದ್ದೆಗಳಿಗೆ ರಾಜೀನಾಮೆಗಳನ್ನೂ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.





