ವಿದೇಶಗಳಲ್ಲಿ 6,500ಕ್ಕೂ ಹೆಚ್ಚು ಭಾರತೀಯ ಕೈದಿಗಳು: ವಿ.ಕೆ.ಸಿಂಗ್

ಹೊಸದಿಲ್ಲಿ, ಜು.21: ಸುಮಾರು 6,500ಕ್ಕೂ ಹೆಚ್ಚು ಮಂದಿ ಭಾರತೀಯರು 75 ದೇಶಗಳ ಬಂದಿಖಾನೆಗಳಲ್ಲಿದ್ದಾರೆ. ಅವರಲ್ಲಿ ಗರಿಷ್ಠ 1,896 ಮಂದಿ ಸೌದಿ ಅರೇಬಿಯದ ಕಾರಾಗೃಹಗಳಲ್ಲಿದ್ದಾರೆ. 354 ಮಂದಿ ಶಿಕ್ಷೆಯ ಅವಧಿಯನ್ನು ಪೂರೈಸಿದ್ದು, ಸ್ವದೇಶಕ್ಕೆ ಹಿಂದಿರುಗಲು ಕಾಯುತ್ತಿದ್ದಾರೆಂದು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ.ಸಿಂಗ್ ಲೋಕಸಭೆಗಿಂದು ಲಿಖಿತ ಉತ್ತರವೊಂದರಲ್ಲಿ ತಿಳಿಸಿದ್ದಾರೆ.
ಭಾರತವು ಶಿಕ್ಷೆಗೊಳಗಾದವರ ವರ್ಗಾವಣೆಯ ಬಗ್ಗೆ 42 ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಅದರನ್ವಯ ಕೆಲವು ದೇಶಗಳಿಂದ ಭಾರತೀಯ ಕೈದಿಗಳನ್ನು ಸ್ವದೇಶಕ್ಕೆ ಕರೆತರಲಾಗುವುದೆಂದು ಅವರು ಹೇಳಿದರು.
ಗರಿಷ್ಠ 1,896 ಮಂದಿ ಭಾರತೀಯರು ಸೌದಿ ಅರೇಬಿಯದ ಕಾರಾಗೃಹಗಳಲ್ಲಿದ್ದಾರೆ. ಆ ಬಳಿಕ ಕ್ರಮವಾಗಿ ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ 764, ನೇಪಾಳದಲ್ಲಿ 614, ಅಮೆರಿಕದಲ್ಲಿ 595 ಹಾಗೂ ಪಾಕಿಸ್ತಾನದಲ್ಲಿ 518 ಮಂದಿ ಭಾರತೀಯ ಕೈದಿಗಳಿದ್ದಾರೆಂದು ಸಿಂಗ್ ಮಾಹಿತಿ ನೀಡಿದರು.
ಕುವೈತ್‌ನಲ್ಲಿ 325, ಮಲೇಶ್ಯದಲ್ಲಿ 293, ಬಹ್‌ರೈನ್‌ನಲ್ಲಿ 235, ಚೀನಾದಲ್ಲಿ 105 ಹಾಗೂ ಬಾಂಗ್ಲಾದೇಶದಲ್ಲಿ 130 ಮಂದಿ ಭಾರತೀಯರು ಬಂಧನದಲ್ಲಿದ್ದಾರೆಂದು ಅವರು ಅಂಕೆ-ಸಂಖ್ಯೆ ನೀಡಿದರು.
ಆಸ್ಟ್ರೇಲಿಯ, ಸೈಪ್ರಸ್, ಈಜಿಪ್ಟ್, ಜಪಾನ್, ಜೋರ್ಡಾನ್, ಡೆನ್ಮಾರ್ಕ್, ಫ್ರಾನ್ಸ್, ಗ್ರೀಸ್, ಲೆಬನಾನ್ ಹಾಗೂ ಮಾರಿಶಸ್ ಸಹಿತ ಇನ್ನೂ ಹಲವು ದೇಶಗಳಲ್ಲೂ ಭಾರತೀಯರು ಕಾರಾಗೃಹಗಳಲ್ಲಿದ್ದಾರೆ.
ಲೋಕಸಭೆಯಲ್ಲಿ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಾರತೀಯ ಮೀನುಗಾರರೆಂದು ನಂಬಲಾಗಿರುವ 261 ಮಂದಿ ಪ್ರಸಕ್ತ ಪಾಕಿಸ್ತಾನದ ಜೈಲುಗಳಲ್ಲಿದ್ದಾರೆಂದು ತಿಳಿಸಿದರು.





