ಆರೋಗ್ಯ ಸೇವೆಗೆ ನತದೃಷ್ಟ ಗ್ರಾಮೀಣರ ಹಪಾಹಪಿ
ವೈದ್ಯರ ಭೇಟಿಗೆ ಸಾವಿರ ಕಿಲೋಮೀಟರ್ ಪ್ರಯಾಣ, ಒಂದೂವರೆ ವರ್ಷ ಕಾಯುವಿಕೆ

ಒಂಬತ್ತು ತಿಂಗಳ ಬಾಲೆ ರುಕ್ಸಾನಾ ಭುಜದಲ್ಲಿನ ಗಾಯ ವಾಸಿಯಾಗುತ್ತಿಲ್ಲ. ತಂದೆ, ತಾಯಿ ಹಾಗೂ ದೇಶದ ಮೂಲೆ ಮೂಲೆಗಳಿಂದ ಬಂದ ಇಂಥ ನತದೃಷ್ಟ ರೋಗಿಗಳ ಜತೆ ಈಕೆ ವಾಸವಿದ್ದಾಳೆ. ಅದೂ ಎಲ್ಲಿ ಗೊತ್ತೇ? ದಿಲ್ಲಿ ಮೆಟ್ರೊದ ಎಐಐ ಎಂಎಸ್ ರೈಲು ನಿಲ್ದಾಣದ ಹೊರಗಿನ ಫುಟ್‌ಪಾತ್‌ನಲ್ಲಿ. ಗದ್ದಲ, ಧೂಳು ಹಾಗೂ ಸಂಚಾರದ ಕಿರಿಕಿರಿ ನಡುವೆ ಆರು ತಿಂಗಳು ತಳ್ಳಿದ ಬಳಿಕ ಇದೀಗ ಈಕೆಗೆ ಎಐಐಎಂಎಸ್ ವೈದ್ಯರ ಭೇಟಿಗೆ ದಿನಾಂಕ ನಿಗದಿಯಾಗಿದೆ. ಆ ಭೇಟಿಯ ದಿನ ಒಂದು ವರ್ಷದ ಬಳಿಕ!
ಸದಾ ಮೌನಿ, ನಗು ಕಾಣದ ಮುಖದ ಈ ಬಾಲೆ ಬಿಹಾರದ ಪೂರ್ವ ಚಂಪರಣ್ ಜಿಲ್ಲೆಯಿಂದ 1,023 ಕಿಲೋಮೀಟರ್ ಪ್ರಯಾಣ ಮಾಡಿ ವೈದ್ಯಕೀಯ ನೆರವಿಗಾಗಿ ರಾಷ್ಟ್ರ ರಾಜಧಾನಿಗೆ ಬಂದಿದ್ದಾಳೆ. ನ್ಯಾಷನಲ್ ಸ್ಯಾಂಪಲ್ ಸರ್ವೇ ಕಚೇರಿ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಅಂಕಿ ಅಂಶಗಳಲ್ಲಿ ಇವರೂ ಸೇರುತ್ತಾರೆ. ಈ ವರದಿಯ ಪ್ರಕಾರ, ಭಾರತದ ಗ್ರಾಮೀಣ ಪ್ರದೇಶಗಳಿಂದ ರಾತ್ರಿಯಿಡೀ ಪ್ರಯಾಣ ಮಾಡುವ ಲಕ್ಷಾಂತರ ಮಂದಿಯ ಪೈಕಿ ಶೇ. 48ರಷ್ಟು ಮಂದಿ ವೈದ್ಯಕೀಯ ಚಿಕಿತ್ಸೆಗಾಗಿ ಬರುವವರು. ವಿಶ್ವದಲ್ಲಿ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹದಗೆಟ್ಟಿರುವುದನ್ನು ಇವರ ಪ್ರಯಾಣ ಪ್ರತಿಬಿಂಬಿಸುತ್ತದೆ.
ಸಾರ್ವಜನಿಕ ವಲಯಕ್ಕೆ ಹೋಲಿಸಿದರೆ ಖಾಸಗಿ ವಲಯದ ಆರೋಗ್ಯಸೇವೆ ನಾಲ್ಕುಪಟ್ಟು ದುಬಾರಿಯಾದರೂ, ಭಾರತದ ಗ್ರಾಮೀಣ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಖಾಸಗಿ ವಲಯದ ಆರೋಗ್ಯ ಸೌಲಭ್ಯ ಪಡೆಯುತ್ತಾರೆ. ಭಾರತದ ಶೇಕಡ 20ರಷ್ಟು ಕಡುಬಡವರ ಮಾಸಿಕ ವೆಚ್ಚದ 15 ಪಟ್ಟು ದುಬಾರಿ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಕಚೇರಿಯ ಮತ್ತೊಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ರುಕ್ಸಾನಾಳ ತಂದೆ ಮುಹಮ್ಮದ್ ಕಲೀಮುದ್ದೀನ್ (33) ಕೃಷಿಕ. ಆರು ತಿಂಗಳ ದಿಲ್ಲಿ ಫುಟ್‌ಪಾತ್ ವಾಸಕ್ಕೆ ಈಗಾಗಲೇ ರೂ. 60,000 ವೆಚ್ಚ ಮಾಡಿದ್ದಾರೆ. ಇದರಲ್ಲಿ ರೂ. 24,000 ವಿಫಲ ವೈದ್ಯಕೀಯ ಚಿಕಿತ್ಸೆಗೆ ವೆಚ್ಚವಾಗಿದೆ. ಕಲೀಮುದ್ದೀನ್ ಅವರ ಸರಾಸರಿ ವಾರ್ಷಿಕ ಆದಾಯ ರೂ. 40,000 ಮೀರುವುದಿಲ್ಲ. ‘‘ಮೂಲ ರೋಗ ಪತ್ತೆ ಹಾಗೂ ತಪಾಸಣೆ ಮಾಡಲಾಗಿದೆ. ಚಿಕಿತ್ಸೆ ಇನ್ನೂ ಆರಂಭವಾಗಬೇಕಿದೆ. ಈ ವೈದ್ಯರು ಒಂದು ವರ್ಷದ ಬಳಿಕ ಭೇಟಿಗೆ ದಿನಾಂಕ ನಿಗದಿ ಮಾಡಿದ್ದಾರೆ. ಆಕೆಯ ಗಾಯಕ್ಕೆ ಹೇಗೆ ಚಿಕಿತ್ಸೆ ನೀಡುವುದು’’ ಎಂದು ಕಲೀಮುದ್ದೀನ್ ಹತಾಶರಾಗಿ ಪ್ರಶ್ನಿಸುತ್ತಾರೆ.
ತಮ್ಮ ಮನೆಗಳ ಸನಿಹದಲ್ಲಿ ಉತ್ತಮ ಆರೋಗ್ಯ ಸೇವೆ ಇಲ್ಲದ ಕಾರಣ ಕಲೀಮುದ್ದೀನ್ ಅವರಂಥ ಅಸಂಖ್ಯಾತ ಬಡವರು ಗುಣಮಟ್ಟದ ಚಿಕಿತ್ಸೆ ಅರಸಿ ದಿಲ್ಲಿಯತ್ತ ಮುಖ ಮಾಡುತ್ತಾರೆ. ಬಿಹಾರದಲ್ಲಿ ಬಾಲ್ಯದ ಭೇದಿ ಹಾಗೂ ನ್ಯುಮೋನಿಯಾಗೆ ನೀಡುವ ಚಿಕಿತ್ಸೆಯಲ್ಲಿ ಶೇ. 90ರಷ್ಟು ಚಿಕಿತ್ಸೆಗಳು ಸಮರ್ಪಕವಾಗಿಲ್ಲ.
ಹೆಚ್ಚುತ್ತಿರುವ ವೆಚ್ಚ
ಎಐಐಎಂಎಸ್ ಮೆಟ್ರೊ ಸ್ಟೇಷನ್ ಹೊರಗೆ ಇರುವ ಇತರ ಹಲವು ಕುಟುಂಬಗಳ ಕಥೆಯೂ ಇದೇ. ವೈದ್ಯರನ್ನು ಸಂಪರ್ಕಿಸುವ ಸಲುವಾಗಿ ಇಲ್ಲಿ ಠಿಕಾಣಿ ಹೂಡಿದ್ದಾರೆ. ಬಾಡಿಗೆ ಕೊಠಡಿ ಅಥವಾ ಹೋಟೆಲ್‌ಗಳಲ್ಲಿ ಉಳಿಯುವ ಆರ್ಥಿಕ ಚೈತನ್ಯ ಅವರಿಗಿಲ್ಲ. ಕಲೀಮುದ್ದೀನ್ ವೆಚ್ಚ ಮಾಡಿರುವ ಹಣ, ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಕಚೇರಿ ಬಿಡುಗಡೆ ಮಾಡಿರುವ ಅಂಕಿ ಅಂಶವಾದ ಒಂದು ಆರೋಗ್ಯ ಪ್ರವಾಸಕ್ಕೆ 15,336 ರೂಪಾಯಿ ಎಂಬ ವೆಚ್ಚದ ಪ್ರಮಾಣದ ನಾಲ್ಕು ಪಟ್ಟು.
ಶೇ. 86ರಷ್ಟು ಗ್ರಾಮೀಣ ಜನರಿಗೆ ಹಾಗೂ ಶೇ. 82ರಷ್ಟು ನಗರದ ಜನರಿಗೆ ಆರೋಗ್ಯ ವೆಚ್ಚ ಬೆಂಬಲ ವ್ಯವಸ್ಥೆ ಇಲ್ಲ. ನಗರ ಪ್ರದೇಶಗಳ ಶೇ. 12ರಷ್ಟು ಮಂದಿ ಹಾಗೂ ಗ್ರಾಮೀಣ ಜನಸಮುದಾಯದ ಶೇ. 13ರಷ್ಟು ಮಂದಿ ಮಾತ್ರವೇ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯ ಮೂಲಕ ಅಥವಾ ಅಂಥದ್ದೇ ಇತರ ಯೋಜನೆಗಳ ಮೂಲಕ ವಿಮಾ ಸುರಕ್ಷೆ ಹೊಂದಿ ದ್ದಾರೆ. ಸಮರ್ಪಕ ಸಾರ್ವಜನಿಕ ಆರೋಗ್ಯ ಸೌಲಭ್ಯ ಹಾಗೂ ಆರೋಗ್ಯ ಸಂರಕ್ಷಣೆ ವೆಚ್ಚ ಹೆಚ್ಚುತ್ತಿರುವುದು, ಪ್ರತಿ ವರ್ಷ 39 ದಶಲಕ್ಷ ಮಂದಿ ಮತ್ತೆ ಬಡತನ ರೇಖೆಗಿಂತ ಕೆಳಕ್ಕೆ ಹೋಗಲು ಕಾರಣವಾಗುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ.
‘‘ಹಲವು ಮಂದಿ ಪ್ರತಿ ವಾರ ಇಲ್ಲಿಗೆ ಆಗಮಿಸಿ, ನಮಗೆ ಆಹಾರ ನೀಡುತ್ತಾರೆ. ಇದರಿಂದ ನಾವು ಉಳಿಯುವುದು ಸಾಧ್ಯವಾಗಿದೆ’’ ಎಂದು ಕಲೀಮುದ್ದೀನ್ ಹೇಳುತ್ತಾರೆ. ಒಂದು ಸಿಖ್ ತಂಡದಿಂದ ಇವರು ಪ್ರತಿ ವಾರ ಆಹಾರ ಪಡೆಯುತ್ತಾರೆ. ‘‘ಅವರು ಬಾರದಿದ್ದರೆ ನಾವು ಒಂದು ಪ್ಲೇಟ್ ಅನ್ನ ಮತ್ತು ತರಕಾರಿಗೆ 30 ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ’’ ಎನ್ನುವುದು ಅವರ ಅಳಲು.
ವೈದ್ಯಕೀಯ ಪ್ರವಾಸ
ಕಲೀಮುದ್ದೀನ್ ಅವರ ರಾಜ್ಯದಿಂದ ರಾತ್ರಿಯಿಡೀ ಪ್ರಯಾಣ ಮಾಡಿ ಬರುವ ಪ್ರತಿ 1,000 ಮಂದಿಯ ಪೈಕಿ 581 ಮಂದಿ ವೈದ್ಯಕೀಯ ಉದ್ದೇಶಕ್ಕಾಗಿಯೇ ಬರುತ್ತಾರೆ. ಈ ಪ್ರಮಾಣ ದೇಶದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಿಂದ ಬರುವ ಆರನೆ ಅತಿದೊಡ್ಡ ಸಂಖ್ಯೆಯ ಜನಸಮೂಹವಾಗಿದೆ ಎಂದು ಈ ವರದಿ ಹೇಳುತ್ತದೆ. ಪಶ್ಚಿಮ ಬಂಗಾಳದಿಂದ ಪ್ರತಿ 1,000 ಮಂದಿಯ ಪೈಕಿ 633 ಮಂದಿ, ಅಸ್ಸಾಂನಿಂದ 599 ಮಂದಿ ಇಂಥ ಚಿಕಿತ್ಸೆಗಾಗಿ ಬರುತ್ತಿದ್ದು, ಈ ಎರಡು ರಾಜ್ಯಗಳಿಂದ ಬರುವವರ ಪ್ರಮಾಣ ಅತ್ಯಧಿಕ. ಇದಕ್ಕೆ ವಿರುದ್ಧವಾಗಿ ದಿಲ್ಲಿ ಗ್ರಾಮೀಣ ಪ್ರದೇಶದಿಂದ ಬರುವವರ ಪೈಕಿ ಸಾವಿರಕ್ಕೆ 211 ಮಂದಿ ಹಾಗೂ ಮೇಘಾಲಯದಿಂದ 1,000ಕ್ಕೆ 250 ಮಂದಿ ಮಾತ್ರ ವೈದ್ಯಕೀಯ ಚಿಕಿತ್ಸೆಗಾಗಿ ಬರುತ್ತಾರೆ. ಇದು ಯಾವುದೇ ರಾಜ್ಯಗಳಿಂದ ಬರುವ ಕನಿಷ್ಠ ಸಂಖ್ಯೆ.
ಬಿಹಾರದಲ್ಲಿ ಸುಮಾರು 104 ದಶಲಕ್ಷ ಜನರಿದ್ದು, ಇದು ದೇಶದ ಮೂರನೇ ಅತಿಹೆಚ್ಚು ಜನಸಂಖ್ಯೆಯ ರಾಜ್ಯ. ಜತೆಗೆ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ (ಶೇಕಡ 33.7) ಕೂಡಾ ಇಲ್ಲಿ ಅತ್ಯಧಿಕ. ಬಿಹಾರ ಹೊರತುಪಡಿಸಿದರೆ, ಛತ್ತೀಸ್‌ಗಢ (ಶೇ. 39.9) ಮತ್ತು ಜಾರ್ಖಂಡ್ (36.9) ರಾಜ್ಯಗಳಲ್ಲಿ ಮಾತ್ರ ಅತ್ಯಧಿಕ ಪ್ರಮಾಣದ ಬಡವರಿದ್ದಾರೆ.
ಸಾಮಾನ್ಯವಾಗಿ ಬಡತನದ ಜತೆ ಜತೆಗೇ ಆರೋಗ್ಯ ಸೌಲಭ್ಯದ ಕೊರತೆಯೂ ಸೇರಿಕೊಳ್ಳುತ್ತದೆ. ಉದಾಹರಣೆಗೆ ಗರಿಷ್ಠ ಪ್ರಮಾಣದ ಅಪೌಷ್ಟಿಕ ಮಕ್ಕಳು ಇರುವ ಜಾರ್ಖಂಡ್ ಹಾಗೂ ಛತ್ತೀಸ್‌ಗಢದಲ್ಲಿ ಸಾಂಸ್ಥಿಕ ಹೆರಿಗೆಗೆ ಇರುವ ಮೂಲಸೌಕರ್ಯಗಳು ಕೂಡಾ ಅತ್ಯಲ್ಪ.ಹೆಚ್ಚು ಗಮನ ನೀಡಬೇಕಾದ ರಾಜ್ಯಗಳು ಎಂಬ ಪಟ್ಟಿಯಲ್ಲಿ ಸೇರಿರುವ 18 ರಾಜ್ಯಗಳಲ್ಲಿ ತೀರಾ ಕಳಪೆ ಆರೋಗ್ಯ ಸೂಚಕಗಳು ಇವೆ. ಕೇಂದ್ರ ಸರಕಾರಿ ಪ್ರಾಯೋಜಿತ ಆರೋಗ್ಯ ಯೋಜನೆಗಳಿಗೆ ಅನುದಾನ ಕಡಿತಗೊಳಿಸಲಾಗುತ್ತದೆ ಎಂಬ ನಿರೀಕ್ಷೆಯಿಂದ ಹಲವು ರಾಜ್ಯಗಳು ಕೂಡಾ ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚವನ್ನು ಕಡಿಮೆ ಮಾಡಿವೆ. ಏಕೆಂದರೆ ಇವುಗಳಿಗೆ ವೆಚ್ಚ ಮಾಡಲು ರಾಜ್ಯ ಸರಕಾರಗಳಲ್ಲಿ ಹಣ ಇಲ್ಲ.
ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಹಾಗೂ ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾದ ಅಂದಾಜಿನ ಪ್ರಕಾರ, ಈಶಾನ್ಯ ಪ್ರದೇಶಗಳಲ್ಲಿ ಆರೋಗ್ಯ ಅಗತ್ಯತೆಗಳನ್ನು ಪೂರೈಸಬೇಕಾದರೆ ಹೆಚ್ಚುವರಿಯಾಗಿ 8 ಲಕ್ಷ ಆಸ್ಪತ್ರೆ ಬೆಡ್ ಸೌಲಭ್ಯವನ್ನು ಹೆಚ್ಚಿಸುವುದು ಅಗತ್ಯವಾಗಿದೆ.
ಭಾರತದ ಬಡ ರಾಜ್ಯಗಳ ಆರೋಗ್ಯ ಸೂಚಕಗಳು, ವಿಶ್ವದಲ್ಲಿ ಇದಕ್ಕಿಂತ ಬಡ ದೇಶಗಳು ಹೊಂದಿರುವ ಆರೋಗ್ಯ ಸೂಚಕಗಳಿಗಿಂತಲೂ ಕಡಿಮೆ. ಬ್ರಿಕ್ಸ್ ದೇಶಗಳನ್ನು ನೋಡಿದರೂ, ಅತಿ ಕಡಿಮೆ ಪ್ರಮಾಣದ ಹಣವನ್ನು ಆರೋಗ್ಯ ಕ್ಷೇತ್ರದಲ್ಲಿ ವೆಚ್ಚ ಮಾಡುತ್ತಿರುವುದು ಭಾರತದಲ್ಲಿ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಬಿಹಾರದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಿದ ಕೀರ್ತಿ ಹೊಂದಿದ್ದರೂ, ರಾಜ್ಯ ಇನ್ನು ಕೂಡಾ ಭಾರತದ ಬಡತನದ ಏಣಿಯ ತಳದಲ್ಲೇ ಇದೆ. ನಿರುದ್ಯೋಗ, ಸಾರ್ವಜನಿಕ ಹಾಗೂ ವೈಯಕ್ತಿಕ ಮೂಲ ಸೌಕರ್ಯ ವಿಚಾರಕ್ಕೂ ಅಂದರೆ ಹೆದ್ದಾರಿಗಳಿಂದ ಹಿಡಿದು ಶೌಚಾಲಯವರೆಗೂ ಇದು ಅನ್ವಯಿಸುತ್ತದೆ.
ಆರೋಗ್ಯ ಮೂಲಸೌಕರ್ಯ ಕೊರತೆ
ಎಐಐಎಂಎಸ್ ಮುಂದಿನ ವೈದ್ಯಕೀಯ ನಿರಾಶ್ರಿತರು ಮತ್ತು ಅವರ ಪ್ರಯಾಣದ ಕಥೆ ದೇಶದಲ್ಲಿ ಆರೋಗ್ಯ ಸಂರಕ್ಷಣಾ ಕ್ಷೇತ್ರಕ್ಕೆ ಆದ್ಯತೆ ನೀಡದಿರುವ ಕಥೆಯನ್ನು ಪ್ರತಿಫಲಿಸುತ್ತವೆ. ಇಲ್ಲಿ ಕೆಲವು ಅಂಶಗಳನ್ನು ಗಮನಿಸಿ.
ದೇಶದ 4000ಕ್ಕೂ ಅಧಿಕ ಬಹುಕೋಟಿ ಮೂಲಸೌಕರ್ಯ ಯೋಜನೆಗಳಲ್ಲಿ ಕೇವಲ ಒಂಬತ್ತು ಮಾತ್ರ ಆರೋಗ್ಯಕ್ಕೆ ಸಂಬಂಧಪಟ್ಟವು. ಅಂದರೆ ಇದು ಒಟ್ಟು ಮೂಲಸೌಕರ್ಯ ಯೋಜನೆಗಳ ಶೇಕಡ 0.21ರಷ್ಟು. ಇವುಗಳಲ್ಲಿನ ಒಟ್ಟು ಹೂಡಿಕೆ 938 ಕೋಟಿ ರೂಪಾಯಿ. ದೇಶದ 29 ರಾಜ್ಯ ಹಾಗೂ ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇರಿ, 25,308 ಸಾರ್ವಜನಿಕ ಆರೋಗ್ಯ ಕೇಂದ್ರಗಳಿದ್ದು, ಇಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ವೈದ್ಯರ ಕೊರತೆ ಇದೆ. ಕಳೆದ ಹತ್ತು ವರ್ಷಗಳಿಂದೀಚೆಗೆ ಈ ಅಭಾವ ಪರಿಸ್ಥಿತಿ ಶೇ. 200ನ್ನು ದಾಟಿದೆ.
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ವಿಶೇಷ ಅರ್ಹತೆ ಹೊಂದಿದ ವೈದ್ಯಕೀಯ ವೃತ್ತಿಪರರ ಕೊರತೆ ಶೇ. 83ರಷ್ಟು ಇದೆ. 2012ರ ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ ಪ್ರತಿ 10,000 ಮಂದಿಗೆ ಭಾರತದಲ್ಲಿ ಏಳು ವೈದ್ಯರಿದ್ದಾರೆ. ಅಂದರೆ ಈ ಪ್ರಮಾಣ 1:600. ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರದ ಮೇಲೆ ಮಾಡುತ್ತಿರುವ ವೆಚ್ಚ ಕಳೆದ ಎರಡು ವರ್ಷ ಗಳಲ್ಲಿ ಗಣನೀಯವಾಗಿ ಕುಸಿದಿದೆ. 14ನೆ ಹಣಕಾಸು ಆಯೋಗವು ರಾಜ್ಯಗಳಿಗೆ ಹೆಚ್ಚಿನ ಅನುದಾನವನ್ನು ನೀಡಲು ಸೂಚಿಸಿ ರುವುದು ಇದಕ್ಕೆ ಕಾರಣ. ಸಮಗ್ರ ಶಿಶು ಕಲ್ಯಾಣ ಅಭಿವೃದ್ಧಿ ಯೋಜನೆ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್‌ಗಳಿಗೆ ನೀಡುತ್ತಿರುವ ಅನುದಾನ ಕಳೆದ ಎರಡು ವರ್ಷಗಳಲ್ಲಿ ಕ್ರಮವಾಗಿ ಶೇ. 10 ಹಾಗೂ 3.6ರಷ್ಟು ಕುಸಿದಿವೆ.
ಆರೋಗ್ಯ ಹೊರಗುತ್ತಿಗೆ
ಇದೀಗ ನೀತಿ ಆಯೋಗ ಸಾರ್ವಜನಿಕ ಆರೋಗ್ಯ ಕ್ಷೇತ್ರದ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸುತ್ತಿದ್ದು, ಇದರ ಪ್ರಮುಖ ಲಕ್ಷಣಗಳು ಹೀಗಿವೆ.
* ಎಂಬಿಬಿಎಸ್ ಪದವಿ ಪಡೆದ ಎಲ್ಲ ಗ್ರಾಮೀಣ ವೈದ್ಯರನ್ನು ಕುಟುಂಬ ವೈದ್ಯರಾಗಿ ತರಬೇತುಗೊಳಿಸಬೇಕು ಹಾಗೂ ಸರಕಾರ ಇವರಿಗೆ ಪ್ರತಿ ರೋಗಿಯನ್ನು ಚಿಕಿತ್ಸೆ ಮಾಡಿದ ಆಧಾರದಲ್ಲಿ ಪಾವತಿಸಬೇಕು.
* ಕಡಿಮೆ ವೆಚ್ಚದ ಖಾಸಗಿ ಪರ್ಯಾಯಗಳಿಗೆ ಉತ್ತೇಜಕಗಳನ್ನು ನೀಡುವುದು. ಸ್ವಯಂಸೇವಾ ಸಂಸ್ಥೆಗಳು ನಡೆಸುವ ಆಸ್ಪತ್ರೆಗಳು ಹಾಗೂ ಮಿಷನರಿ ಆಸ್ಪತ್ರೆಗಳಿಗೆ ಉತ್ತೇಜನ ನೀಡುವುದು ಹಾಗೂ ಸರಕಾರಿ ಸಂಸ್ಥೆಗಳನ್ನು ಬಲಗೊಳಿಸುವುದು.
* ಎರಡನೇ ಹಂತದಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಆರೋಗ್ಯಕರ ಪೈಪೋಟಿ ಬೆಳೆಯುವಂತೆ ಮಾಡುವುದು. ಇದರಲ್ಲಿ ವೈದ್ಯಕೀಯ ವಿಶೇಷ ಪರಿಣತಿ ಪಡೆದವರ ಸೇವೆ ಸೇರುತ್ತದೆ. ಪ್ರಾಥಮಿಕ ಕೇಂದ್ರಗಳಲ್ಲಿ ಒಬ್ಬ ವೈದ್ಯರ ಕ್ಲಿನಿಕ್ ಸ್ಥಾಪಿಸಿ ಇಲ್ಲಿ, ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗಳಿಗಷ್ಟೇ ಅವಕಾಶ ಕಲ್ಪಿಸುವುದು.
2016ರ ಎಪ್ರಿಲ್‌ನಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ, ಪ್ರಾಥಮಿಕ ಆರೋಗ್ಯ ಕ್ಷೇತ್ರವನ್ನು ಖಾಸಗಿ ವೈದ್ಯರಿಗೆ ಹೊರಗುತ್ತಿಗೆ ನೀಡುವಂತೆ ಶಿಫಾರಸ್ಸು ಮಾಡಲಾಗಿದೆ.
ಬಹುಶಃ ರುಕ್ಸಾನಾಳಂಥವರ ವೈದ್ಯಕೀಯ ಪ್ರವಾಸ ಸದ್ಯಕ್ಕೆ ಕೊನೆಗೊಳ್ಳುವಂತೆ ಕಾಣುತ್ತಿಲ್ಲ.









