ಹಾಕಿ ದಂತಕತೆ ಮುಹಮ್ಮದ್ ಶಾಹಿದ್‌ಗೆ ಅಂತಿಮ ವಿದಾಯ

ವಾರಣಾಸಿ, ಜು.21: ಹಾಕಿ ದಂತಕತೆ ಮುಹಮ್ಮದ್ ಶಾಹಿದ್‌ರ ಪಾರ್ಥಿವ ಶರೀರವನ್ನು ಗುರುವಾರ ಮಧ್ಯಾಹ್ನ ಇಲ್ಲಿನ ತಾಟಕ್‌ಪುರ ಸ್ಮಶಾನದಲ್ಲಿ ದಫನ ಮಾಡಲಾಗಿದ್ದು, ಐತಿಹಾಸಿಕ ನಗರದಲ್ಲಿ ಸಾವಿರಾರು ಜನರು ಜಮಾಯಿಸಿ ಮಾಜಿ ಒಲಿಂಪಿಯನ್‌ಗೆ ಅಂತಿಮ ವಿದಾಯ ಕೋರಿದರು.
ಬುಧವಾರ ರಾತ್ರಿ ಗುರ್ಗಾಂವ್‌ನ ಮಕ್ಬೂಲ್ ಆಲಂ ರಸ್ತೆಯಲ್ಲಿರುವ ನಿವಾಸದಲ್ಲಿ ಶಾಹಿದ್‌ರ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನೂರಾರು ಸಂಬಂಧಿಕರು, ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಮಾಜಿ ಒಲಿಂಪಿಯನ್‌ಗಳಾದ ಜಾಫರ್ ಇಕ್ಬಾಲ್, ಅಶೋಕ್ ಕುಆರ್, ಸುಜಿತ್ ಕುಮಾರ್, ಆರ್‌ಪಿ ಸಿಂಗ್, ಶಖೀಲ್ ಅಹ್ಮದ್ ಹಾಗೂ ಸರ್ದಾರ್ ಸಿಂಗ್ ಶಾಹಿದ್‌ರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಮಧ್ಯಾಹ್ನ 12:45ಕ್ಕೆ ಅಶೋಕ್ ಕುಮಾರ್ ಹಾಗೂ ಜಾಫರ್ ಇಕ್ಬಾಲ್ ಮೃತದೇಹದ ಮೇಲೆ ಭಾರತೀಯ ತ್ರಿವರ್ಣ ಧ್ವಜ ಹೊದಿಸಿದರು. ಆ ಬಳಿಕ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ದಾಯಮ್‌ಖಾನ್ ಮಸೀದಿಯಲ್ಲಿನಮಾಝ್ ನೆರವೇರಿಸಿದ ಬಳಿಕ ಶಾಹಿದ್‌ರ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.
ಕಿಡ್ನಿ ಹಾಗೂ ಲಿವರ್ ವೈಫಲ್ಯದಿಂದಾಗಿ ಬುಧವಾರ ಬೆಳಗ್ಗೆ ಶಾಹಿದ್ ಮೃತಪಟ್ಟಿದ್ದರು. ಶಾಹಿದ್ ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಳಿಯನನ್ನು ಅಗಲಿದ್ದಾರೆ.





