ಇಂಗ್ಲೆಂಡ್‌ಗೆ ಪಾಕ್ ಎದುರಾಳಿ
ಶುಕ್ರವಾರ ಎರಡನೆ ಟೆಸ್ಟ್ ಆರಂಭ

ಓಲ್ಡ್‌ಟ್ರಾಫೋರ್ಡ್, ಜು.21: ಆತಿಥೇಯ ಇಂಗ್ಲೆಂಡ್ ತಂಡ ಶುಕ್ರವಾರ ಇಲ್ಲಿ ಆರಂಭವಾಗಲಿರುವ ಎರಡನೆ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.
ಇಂಗ್ಲೆಂಡ್ ತಂಡ ಮೊದಲ ಟೆಸ್ಟ್‌ನಲ್ಲಿ ಪಾಕ್ ಸ್ಪಿನ್ನರ್ ಯಾಸಿರ್ ಷಾ ಸ್ಪಿನ್ ಮೋಡಿಗೆ ಸಿಲುಕಿ 75 ರನ್‌ಗಳ ಅಂತರದಿಂದ ಸೋತಿತ್ತು.ಲಾರ್ಡ್ಸ್ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲವಾಗಿದ್ದ ಇಂಗ್ಲೆಂಡ್ 2ನೆ ಟೆಸ್ಟ್‌ನಲ್ಲಿ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸುವ ಇರಾದೆಯಲ್ಲಿದೆ.
14 ಸದಸ್ಯರ ತಂಡದಲ್ಲಿ ಸ್ಟಾರ್ ಬೌಲರ್ ಆ್ಯಂಡರ್ಸನ್‌ರನ್ನು ಕಣಕ್ಕಿಳಿಸಲಿದೆ. ಸ್ಪಿನ್ ಬೌಲಿಂಗ್ ಸ್ಥಾನಕ್ಕೆ ಮೊಯಿನ್ ಅಲಿ ಹಾಗೂ ಅಬ್ದುಲ್ ರಶೀದ್ ನಡುವೆ ನೇರ ಪೈಪೋಟಿಯಿದೆ. ಆಂಗ್ಲರು ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ಪಾಕ್ ತಂಡ ಎರಡನೆ ಟೆಸ್ಟ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಪಾಕ್ ಬ್ಯಾಟ್ಸ್‌ಮನ್‌ಗಳು ಎರಡೂ ಪಂದ್ಯಗಳಲ್ಲಿ ಸಾಕಷ್ಟು ರನ್ ಗಳಿಸಿದ್ದರು. ನಾಲ್ಕನೆ ದಿನದ ಪಂದ್ಯದಲ್ಲಿ ಮೂವರು ಎಡಗೈ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ ಯಾಸಿರ್ ಷಾ ಒತ್ತಡವನ್ನು ಕಡಿಮೆ ಮಾಡಿದ್ದರು.
ಅಂಕಿ-ಅಂಶ:
*2001ರಲ್ಲಿ ಓಲ್ಡ್ ಟ್ರಾಫೋರ್ಡ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೋತ ಬಳಿಕ ಇಂಗ್ಲೆಂಡ್ ಏಳು ಟೆಸ್ಟ್ ಪಂದ್ಯಗಳಲ್ಲಿ ಜಯ ಹಾಗೂ ಎರಡರಲ್ಲಿ ಡ್ರಾ ಸಾಧಿಸಿದೆ.
* ಅಲೆಸ್ಟೈರ್ ಕುಕ್ ಇಂಗ್ಲೆಂಡ್ ತಂಡವನ್ನು ನಾಯಕನಾಗಿ 50ನೆ ಪಂದ್ಯದಲ್ಲಿ ಮುನ್ನಡೆಸಲು ಸಜ್ಜಾಗಿದ್ದಾರೆ. ಈ ಹಿಂದೆ ಮೂವರು ನಾಯಕರು ಈ ಸಾಧನೆ ಮಾಡಿದ್ದರು. ಅವರುಗಳೆಂದರೆ: ಮೈಕಲ್ ಅಥರ್ಟನ್(54), ಮೈಕಲ್ ವಾನ್(51) ಹಾಗೂ ಆ್ಯಂಡ್ರೂ ಸ್ಟ್ರಾಸ್(50).
*ಜಾನಿ ಬೈರ್‌ಸ್ಟೋವ್ ಈ ವರ್ಷ ಇಂಗ್ಲೆಂಡ್‌ನ ಪರ ಗರಿಷ್ಠ ಸ್ಕೋರ್(703 ರನ್) ದಾಖಲಿಸಿದ್ದಾರೆ. 2012ರಲ್ಲಿ ಇಂಗ್ಲೆಂಗ್ ವಿಕೆಟ್‌ಕೀಪರ್ ಮ್ಯಾಟ್‌ಪ್ರಿಯರ್ ಬಾರಿಸಿರುವ ಗರಿಷ್ಠ ಸ್ಕೋರ್ (777)ದಾಖಲೆ ಮುರಿಯಲು ಇನ್ನೂ 75 ರನ್ ಅಗತ್ಯವಿದೆ.
*ಪಾಕ್ ಸ್ಪಿನ್ನರ್ ಯಾಸಿರ್ ಷಾ 13 ಟೆಸ್ಟ್‌ಗಳಲ್ಲಿ 86 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 100 ವಿಕೆಟ್ ಪಡೆದ ಸಾಧನೆ ಮಾಡಲು ಇನ್ನು 14 ವಿಕೆಟ್ ಅಗತ್ಯವಿದೆ.







