ಮರ್ಲಾನ್ ಸ್ಯಾಮುಯೆಲ್ಸ್ ‘ವಿಂಡೀಸ್‌ನ ವರ್ಷದ ಕ್ರಿಕೆಟಿಗ’

ಆ್ಯಂಟಿಗುವಾ, ಜು.21: ಈ ವರ್ಷ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದ ಮರ್ಲಾನ್ ಸ್ಯಾಮುಯೆಲ್ಸ್ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಯಿಂದ ವರ್ಷದ ಕ್ರಿಕೆಟಿಗನಾಗಿ ನೇಮಕಗೊಂಡಿದ್ದಾರೆ. ಸ್ಯಾಮುಯೆಲ್ಸ್ ವರ್ಷದ ಏಕದಿನ ಆಟಗಾರನಾಗಿಯೂ ಆಯ್ಕೆಯಾಗಿದ್ದಾರೆ.
ಸ್ಯಾಮುಯೆಲ್ಸ್ ಈ ವರ್ಷ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿ ಮೂಡಿಬಂದಿದ್ದು, 2015ರ ಬಳಿಕ ಆಡಿರುವ 22 ಏಕದಿನ ಪಂದ್ಯಗಳಲ್ಲಿ 859 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳಿವೆ. ಎಪ್ರಿಲ್‌ನಲ್ಲಿ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್‌ನಲ್ಲಿ ಜಮೈಕಾದ 35ರ ಹರೆಯದ ಸ್ಯಾಮುಯೆಲ್ಸ್ ವಿಂಡೀಸ್ ಚಾಂಪಿಯನ್ಸ್ ಟ್ರೋಫಿ ಜಯಿಸಲು ಪ್ರಮುಖ ಕಾಣಿಕೆ ನೀಡಿದ್ದರು.
ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ 156 ರನ್ ಸವಾಲು ಪಡೆದಿದ್ದ ವಿಂಡೀಸ್ ಸ್ಯಾಮುಯೆಲ್ಸ್ 66 ಎಸೆತಗಳಲ್ಲಿ ಬಾರಿಸಿದ್ದ 85 ರನ್ ನೆರವಿನಿಂದ ಗುರಿಯನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿತ್ತು. ಈ ಸಾಹಸಕ್ಕೆ ಸ್ಯಾಮುಯೆಲ್ಸ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದಿತ್ತು.
ಸ್ಯಾಮುಯೆಲ್ಸ್ ಗುರುವಾರ ಆ್ಯಂಟಿಗುವಾದಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ. ಏಳು ಶತಕ ಹಾಗೂ ಒಂದು ದ್ವಿಶತಕ ಸಹಿತ 3,622 ರನ್ ಗಳಿಸಿರುವ ಸ್ಯಾಮುಯೆಲ್ಸ್ ಜೇಸನ್ ಹೋಲ್ಡರ್ ತಂಡದ ಅತ್ಯಂತ ಅನುಭವಿ ಆಟಗಾರ.
ಇದೇ ವೇಳೆ, ವೆಸ್ಟ್‌ಇಂಡೀಸ್ ಮಹಿಳಾ ತಂಡದ ನಾಯಕಿ ಸ್ಟೀಫನ್ ಟೇಲರ್ ವರ್ಷದ ಟ್ವೆಂಟಿ-20 ಹಾಗು ಏಕದಿನ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.







