ರಾಷ್ಟ್ರೀಯತೆ ಮತ್ತು ದೇಶಭಕ್ತಿ ಬೆಳೆಸಲು ಪ್ರಧಾನಿ ಮೋದಿಯ ಹೊಸ 8 ಅಡಿಗಳ ಐಡಿಯಾ!

ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷವು ದೇಶದಾದ್ಯಂತ ತ್ರಿರಂಗ ಯಾತ್ರೆಗಳನ್ನು ಮಾಡಿ ರಾಷ್ಟ್ರೀಯತೆ ಮತ್ತು ದೇಶಭಕ್ತಿಯನ್ನು ಸಾರಬೇಕು ಎಂದಿದ್ದಾರೆ. ಈ ಎರಡು ಘೋಷಣೆಗಳು ಇತ್ತೀಚೆಗಿನ ತಿಂಗಳಲ್ಲಿ ಅವರ ಬೆಂಬಲಿಗರಲ್ಲಿ ಬಹಳ ಕೇಳಿ ಬಂದಿದೆ. ತ್ರಿರಂಗ ಯಾತ್ರೆಗಳನ್ನು ಸ್ವಾತಂತ್ರ್ಯೋತ್ಸವದಿಂದ ಆರಂಭಿಸಲಾಗುತ್ತದೆ.
ಸಂಸತ್ತಿನ ಮುಂಗಾರು ಅಧಿವೇಶನದ ಎರಡನೇ ದಿನ ಸಂಸದೀಯ ಸಭೆಯಲ್ಲಿ ಮಾತನಾಡಿದ ಮೋದಿ ಯಾತ್ರೆ ಮಾಡಲು ಹೇಳಿದ್ದಾರೆ. ಸಂಸದರು ಮತ್ತು ಶಾಸಕರು ಬೈಕ್‌ಗಳಲ್ಲಿ 8 ಅಡಿ ಉದ್ದದ ತ್ರಿವರ್ಣ ಧ್ವಜ ಹಿಡಿದು ಸಾಗಬೇಕು. ಹಾಗೆ ಜನರಲ್ಲಿ, ಮುಖ್ಯವಾಗಿ ಯುವಕರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯತೆ ಮೂಡಿಸಬೇಕು. ಅಲ್ಲದೆ ಬೈಕ್ ಸವಾರರು ತ್ರಿವರ್ಣದ ಹೆಲ್ಮೆಟನ್ನೂ ಧರಿಸಬೇಕು ಎಂದು ಮೋದಿ ಹೇಳಿರುವುದಾಗಿ ಸಂಸದರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಂಸದರು ಮತ್ತು ಶಾಸಕರು ತಿರಂಗಾ ಯಾತ್ರೆಯ ನೇತೃತ್ವ ವಹಿಸಲಿದ್ದಾರೆ. ವೆಂಕಯ್ಯ ನಾಯ್ಡು ನೇತೃತ್ವದ ಸಚಿವರ ಸಮಿತಿ ಸಂಭ್ರಮಾಚರಣೆಯ ನೀಲನಕ್ಷೆ ಸಿದ್ಧಪಡಿಸಿದ್ದು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅದಕ್ಕೆ ಅಂತಿಮ ರೂಪ ಕೊಡಲಿದ್ದಾರೆ. ಕಾಶ್ಮೀರದ ವಿಚಾರವಾಗಿ ವಿಪಕ್ಷ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹಿಂದೆಯೂ ಬಿಜೆಪಿ ಹೀಗೆ ತಿರಂಗ ಯಾತ್ರೆ ಮಾಡಿದೆ. 1991ರಲ್ಲಿ ಮುರಳಿ ಮನೋಹರ ಜೋಶಿ ಕನ್ಯಾಕುಮಾರಿಯಿಂದ ಶ್ರೀನಗರದ ಲಾಲ್ ಚೌಕ್ ವರೆಗೆ ಹೀಗೆ ಯಾತ್ರೆ ಕೈಗೊಂಡಿದ್ದರು. 2011ರಲ್ಲಿ ಪಕ್ಷದ ಯುವಪಡೆಯ ನೇತೃತ್ವ ವಹಿಸಿದ್ದ ಅನುರಾಗ್ ಠಾಕೂರ್ ಕೂಡ ಇಂತಹ ಯಾತ್ರೆ ಕೈಗೊಂಡರೂ ಅವರಿಗೆ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲು ಅವಕಾಶ ಕೊಟ್ಟಿರಲಿಲ್ಲ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಲವು ಹೆಚ್ಚು ಜನಪ್ರಿಯವಲ್ಲದ ನಾಯಕರನ್ನು ಮುನ್ನೆಲೆಗೆ ತರುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಸ್ಥಳೀಯ ಸೇನಾನಿಗಳು, 1857ನಿಂದ ಸ್ವಾತಂತ್ರ್ಯಪೂರ್ವದವರೆಗಿನ ಹಲವು ನಾಯಕರನ್ನು ನೆನಪಿಸಿಕೊಳ್ಳುವ ಯೋಜನೆಯಿದೆ. ಇತಿಹಾಸ ಮರೆತ ನಾಯಕರನ್ನು ಸ್ಮರಿಸಲಾಗುವುದು ಎಂದು ಗೃಹಸಚಿವರು ಹೇಳಿದ್ದಾರೆ. ಅಲ್ಲದೆ ಎನ್‌ಡಿಎ ಸರಕಾರ ಬಡವರಿಗೆ ಹಾಕಿಕೊಂಡಿರುವ ಕಾರ್ಯಕ್ರಮಗಳನ್ನೂ ಪ್ರಚಾರ ಮಾಡಲಾಗುವುದು.
ಕೃಪೆ: http://indianexpress.com/





