ಅರ್ಚಕ ಸಹಿತ ಇಬ್ಬರ ಮೇಲೆ ಶಂಕೆ
ಏನೆಕಲ್: ದೇವಳದ ಚಿನ್ನಾಭರಣ ಕಳವು

ಸುಬ್ರಹ್ಮಣ್ಯ, ಜು.21: ಇಲ್ಲಿಗೆ ಸಮೀಪದ ಏನೆಕಲ್ ಗ್ರಾಮದ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಉ್ಳಾಕುಲು ಉಳ್ಳಾಲ್ತಿ ಮತ್ತು ಬಚ್ಚನಾಯಕ ದೈವಸ್ಥಾನದ ಚಿನ್ನಾಭರಣ ಕಳವಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ದೇವಳದ ಸಿಬ್ಬಂದಿಯ ಮೇಲೆಯೇ ಶಂಕೆ ವ್ಯಕ್ತವಾಗಿದೆ.
ಮುಜರಾಯಿ ಇಲಾಖೆಯ ಅಧೀನಕ್ಕೆ ಒಳಪಟ್ಟ ಈ ದೇವಳಕ್ಕೆ ಹರಕೆ ರೂಪದಲ್ಲಿ ಬಂದ ಚಿನ್ನಾಭರಣವನ್ನು ದೇವಳದ ಕಚೇರಿಯ ಸೇಫ್‌ಲಾಕರ್‌ನಲ್ಲಿ ಇರಿಸಲಾಗಿತ್ತು. ಈ ಕಚೇರಿಯಲ್ಲಿ ಒಬ್ಬ ಸಿಬ್ಬಂದಿ ಹಾಗೂ ಅರ್ಚಕರಿದ್ದಾರೆ. ಲಾಕರ್‌ನ ಚಾವಿಯು ಇಲಾಖಾ ನಿಯಮಾನುಸಾರ ದೇವಳದ ಮೇಲ್ವಿಚಾರಕ ಸುಬ್ರಹ್ಮಣ್ಯ ಗ್ರಾಪಂ ಕಾರ್ಯದರ್ಶಿ ಮೋನಪ್ಪರವರಲ್ಲಿರಬೇಕಾಗಿತ್ತು. ದೇವಳದ ನಿತ್ಯ ಪೂಜೆ ಹಾಗೂ ಇನ್ನಿತರ ವ್ಯವಹಾರಕ್ಕಾಗಿ ವಿಶ್ವಾಸದ ಮೇರೆಗೆ ಅವರು ದೇವಳದ ಸಹಾಯಕ ನಾಗರಾಜ ಎಂಬವರಲ್ಲಿ ಕೊಟ್ಟಿದ್ದರು.
ಜಿಲ್ಲಾಧಿಕಾರಿಯ ಆದೇಶದಂತೆ ನೂತನ ಸಮಿತಿಗೆ ಅಧಿಕಾರ ಹಾಗೂ ದೇವಳದ ಚಾವಿಯ ಗೊಂಚಲನ್ನು ಹಸ್ತಾಂತರಿಸಲು ದಿನ ನಿಗದಿಯಾದ ಹಿನ್ನೆಲೆಯಲ್ಲಿ ಚಾವಿಯ ಗೊಂಚಲು ಕೊಡುವಂತೆ ದೇವಳದ ಸಹಾಯಕ ನಾಗರಾಜನಲ್ಲಿ ಮೇಲ್ವಿಚಾರಕ ಮೋನಪ್ಪಕೇಳಿದಾಗ ಲಾಕರ್‌ನ ಚಾವಿಯು ಕಾಣೆಯಾಗಿರುವುದಾಗಿ ಹೇಳಿಕೊಂಡಿದ್ದಾನೆ. ಅದರಂತೆ ದೇವಳದ ಸುತ್ತಮುತ್ತ ಚಾವಿಗಾಗಿ ಹುಡುಕಾಟ ನಡೆಸಲಾಗಿತ್ತು. ಎರಡು ದಿನಗಳ ಬಳಿಕ ದೇವಳದ ತುಳಸಿವನದಲ್ಲಿ ಚಾವಿ ಕಂಡುಬಂದಿದೆ. ಮಂಗಳವಾರ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ವೇಳೆ ಸದಸ್ಯರ ಸಮ್ಮುಖದಲ್ಲಿ ಲಾಕರನ್ನು ತೆಗೆದು ನೋಡಿದಾಗ ಅದರಲ್ಲಿರಿಸಲಾಗಿದ್ದ 54.940 ಗ್ರಾಂ ತೂಕದ 32 ಉಂಗುರ ಮತ್ತು 9.950 ಗ್ರಾಂ ತೂಕದ 1 ಚಿನ್ನದ ಸರ ಸೇರಿ 1,90,000 ರೂ. ಮೌಲ್ಯದ ಚಿನ್ನಾಭರಣ ಕಾಣೆಯಾಗಿರುವುದು ಕಂಡುಬಂತು.
ಅರ್ಚಕ ಮುರಳಿ ವೆಂಕಟೇಶ್ ಅಥವಾ ಕಚೇರಿ ಸಿಬ್ಬಂದಿ ನಾಗರಾಜನ ಮೇಲೆ ಸಂಶಯ ವ್ಯಕ್ತಪಡಿಸಿದ ದೇವಳದ ಮೇಲ್ವಿಚಾರಕ ಮೋನಪ್ಪಬುಧವಾರ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದರು. ಅದರಂತೆ ಸುಳ್ಯ ವೃತ್ತ ನಿರೀಕ್ಷಕ ವಿ. ಕೃಷ್ಣಯ್ಯ ದೇವಳಕ್ಕೆ ಭೇಟಿ ನೀಡಿ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಿದಾಗ ಚಿನ್ನಾಭರಣ ಕಳವಿನ ಬಗ್ಗೆ ಸುಳಿವು ಸಿಕ್ಕಿರಲಿಲ್ಲ ಎನ್ನಲಾಗಿದೆ.





