24 ವಾರಗಳ ಅಸಹಜ ಭ್ರೂಣ ತೆಗೆಸಲು ಸುಪ್ರೀಂಕೋರ್ಟ್ ಮೊರೆ ಹೋದ ಮಹಿಳೆ
ಹೊಸದಿಲ್ಲಿ, ಜು.22: ತನ್ನ ಗರ್ಭದಲ್ಲಿ ಬೆಳೆಯುತ್ತಿರುವ 24 ವಾರಗಳ ಅಸಹಜ ಭ್ರೂಣವನ್ನು ತೆಗೆಸಲು ಅನುಮತಿ ನೀಡಬೇಕು ಎಂದು ಕೋರಿ ಮಹಾರಾಷ್ಟ್ರದ ಅತ್ಯಾಚಾರ ಸಂತ್ರಸ್ತೆಯೊಬ್ಬರು ಮನವಿ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಗಳ ಒಳಗಾಗಿ ಅಭಿಪ್ರಾಯ ತಿಳಿಸಲು ಸುಪ್ರೀಂಕೋರ್ಟ್, ಕೇಂದ್ರ ಹಾಗೂ ಮಹಾರಾಷ್ಟ್ರ ಸರಕಾರಗಳಿಗೆ ನೋಟಿಸ್ ನೀಡಿದೆ.
ಅತ್ಯಾಚಾರ ಹಾಗೂ ವಿವಾಹಪೂರ್ವ ಗರ್ಭಿಣಿಯಾಗುವುದರಿಂದ ಎದುರಿಸಬೇಕಾದ ಸಾಮಾಜಿಕ ಕಳಂಕದ ಹಿನ್ನೆಲೆಯಲ್ಲಿ ಮಹಿಳೆಯ ಹೆಸರು ಬಹಿರಂಗಪಡಿಸಿಲ್ಲ. ತಾನು ಬಡಕುಟುಂಬದಿಂದ ಬಂದ ಮಹಿಳೆಯಾಗಿದ್ದು, ಅತ್ಯಾಚಾರದಿಂದಾಗಿ ಗರ್ಭಿಣಿಯಾಗಿದ್ದೇನೆ. ವಿವಾಹವಾಗುವುದಾಗಿ ನಂಬಿಸಿದ ಪ್ರಿಯಕರ ತನಗೆ ಕೈಕೊಟ್ಟು ಬೇರೆ ಮಹಿಳೆ ಜತೆ ವಿವಾಹವಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವುದಾಗಿ ಮಹಿಳೆ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ವಿವರಿಸಿದ್ದಾರೆ.
ಇದು ಅತ್ಯಾಚಾರದ ಫಲವಾಗಿ ಬೆಳೆಯುತ್ತಿರುವ ಭ್ರೂಣ ಎಂಬ ಮಾನಸಿಕ ಖಿನ್ನತೆ ಈಗಲೂ ತಮ್ಮನ್ನು ಕಾಡುತ್ತಿದ್ದು, ಭ್ರೂಣದಲ್ಲಿ ಹಲವು ಅಸಹಜತೆಗಳೂ ಇವೆ. ಈ ಹಿನ್ನೆಲೆಯಲ್ಲಿ ಪೂರ್ಣಾವಧಿ ಅದು ಬೆಳೆಯುವುದು ಕಷ್ಟ. ಈ ಭ್ರೂಣ ತೆಗೆಯಲು ವೈದ್ಯರು ನಿರಾಕರಿಸಿದ್ದು, 20 ವಾರಕ್ಕಿಂತ ಹೆಚ್ಚಾದ ಭ್ರೂಣವನ್ನು ಕಿತ್ತುಹಾಕುವುದು ಕಾನೂನುಬಾಹಿರ ಎಂಬ ಕಾರಣ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇಂಥದ್ದೇ ಪ್ರಕರಣದಲ್ಲಿ 2015ರ ಜುಲೈನಲ್ಲಿ ಗುಜರಾತ್ನಲ್ಲಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯೊಬ್ಬರು 20 ವಾರಕ್ಕಿಂತ ಹೆಚ್ಚು ಬೆಳವಣಿಗೆ ಹೊಂದಿದ್ದ ಭ್ರೂಣ ತೆಗೆಸಲು ಅವಕಾಶ ಕೋರಿದ್ದರು. ಇದರಿಂದ ಆಕೆಯ ಆರೋಗ್ಯಕ್ಕೆ ಇರುವ ಅಪಾಯ ಹಾಗೂ ತಾಯಿಯಾಗಲು ಮಾನಸಿಕವಾಗಿ ಸಿದ್ಧಳಿದ್ದಾಳೆಯೇ ಎಂಬ ಬಗ್ಗೆ ವೈದ್ಯಕೀಯ ವರದಿ ಆಧಾರದಲ್ಲಿ ಅನುಮತಿ ನೀಡುವ ಬಗ್ಗೆ ನಿರ್ಧರಿಸುವುದಾಗಿ ಕೋರ್ಟ್ ಹೇಳಿತ್ತು. ಅಂತಿಮವಾಗಿ ವೈದ್ಯಕೀಯ ವರದಿ ಹಿನ್ನೆಲೆಯಲ್ಲಿ ಆಕೆಯ ಗರ್ಭಪಾತಕ್ಕೆ ಅನುಮತಿ ನೀಡಿತ್ತು.