ಈತನಿಗೆ ಕದಿಯಲು ಬೆಂಝ್, ಆಡಿಗಳೇ ಬೇಕು!
ಕೊನೆಗೂ ಸಿಕ್ಕಿಬಿದ್ದ 100 ಕಾರುಗಳ ಕಳ್ಳ
![ಈತನಿಗೆ ಕದಿಯಲು ಬೆಂಝ್, ಆಡಿಗಳೇ ಬೇಕು! ಈತನಿಗೆ ಕದಿಯಲು ಬೆಂಝ್, ಆಡಿಗಳೇ ಬೇಕು!](https://www.varthabharati.in/sites/default/files/images/articles/2016/07/22/images.jpg)
ಹೊಸದಿಲ್ಲಿ, ಜು.22: ಈತ ಒಬ್ಬ ವಿಶಿಷ್ಟ ಕಾರುಗಳ್ಳ. ಸೂಪರ್ ಚೋರ್ ಬಂಟಿಯಿಂದ ಪ್ರೇರಣೆ ಪಡೆದು ಆತನ ಕಾರ್ಯಶೈಲಿಯನ್ನೇ ಅನುಕರಿಸುತ್ತಿದ್ದ. ಬಂಟಿಯ ಜೀವನ ಆಧರಿತ ಚಿತ್ರ ಓಯೆ ಲಕ್ಕಿ! ಲಕ್ಕಿ ಓಯೆ ಚಿತ್ರವನ್ನು 25 ಬಾರಿ ವೀಕ್ಷಿಸಿ ಈ ವೃತ್ತಿ ರೂಢಿಸಿಕೊಂಡಿದ್ದ. ಈತನ ಕಳ್ಳತನ ಆಯ್ಕೆಗೂ ವಿಶಿಷ್ಟ. ಕೇವಲ ಆಡಿ, ಮರ್ಸಿಡೆಸ್ ಬೆಂಝ್ನಂಥ ಹೈ ಎಂಡ್ ಕಾರುಗಳನ್ನಷ್ಟೇ ಈತ ಕದಿಯುತ್ತಿದ್ದ!.
ನೂರಕ್ಕೂ ಹೆಚ್ಚು ಇಂಥ ಕಾರುಗಳನ್ನು ಕದ್ದ ಬಳಿಕ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಆಗ್ನೇಯ ದಿಲ್ಲಿಯ ದೇವ್ಲಿಯಲ್ಲಿರುವ ಅಡಗುದಾಣದಲ್ಲಿ ಸ್ನೇಹಿತೆ ಜತೆ ವಾಸವಾಗಿದ್ದ ಈತ ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ದಿಲ್ಲಿ ಪೊಲೀಸ್ ಇಲಾಖೆಯ ವಾಹನ ಕಳವು ತಡೆ ಘಟಕ ರಾಬಿನ್ ಎಂಬಾತನ ದಂಧೆ ಬಗ್ಗೆ ಹಾಗೂ ಅಡಗುದಾಣದ ಬಗ್ಗೆ ಸಿಕ್ಕಿದ ಸುಳಿವಿನ ಆಧಾರದಲ್ಲಿ ಆತನನ್ನು ಬಂಧಿಸಿದೆ. ಒಂದು ಬಿಎಂಡಬ್ಲ್ಯು ಹಾಗೂ ಟೊಯೊಟಾ ಫಾರ್ಚ್ಯೂನರ್ ಕಾರನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಆಡಿ ಎ-7 ಕಾರಿನಲ್ಲಿ ನೋಯ್ಡಿದ ಸೆಕ್ಟರ್ 17ಎಗೆ ಬಂದಿದ್ದ ಈತ ಇನ್ನೂ ದುಬಾರಿ ಬಿಎಂಡಬ್ಲ್ಯು ಕಳ್ಳತನ ಮಾಡಿದ್ದ.
ಹದಿನಾಲ್ಕು ವರ್ಷದಿಂದ ಅಪರಾಧ ಕೃತ್ಯ ನಡೆಸುತ್ತಿದ್ದ ರಾಬಿನ್, ಕುಖ್ಯಾತ ಕಾರುಗಳ್ಳ ಮನೋಜ್ ಬಕ್ಕರ್ವಾಲಾನನ್ನು ಜೈಲಿನಲ್ಲಿ ಭೇಟಿಯಾದ ಬಳಿಕ ಈ ದಂಧೆಗೆ ಇಳಿದಿದ್ದ. ಸಾಮಾನ್ಯವಾಗಿ ಐಷಾರಾಮಿ ಕಾಲನಿಗಳಲ್ಲಿ ಮನೆಮಂದಿ ಮುಂಜಾನೆ ವಾಕಿಂಗ್ ಹೋಗುವ ವೇಳೆಯಲ್ಲಿ ಈತನ ಕೈಚಳಕ ತೋರಿಸುತ್ತಿದ್ದ.