ಸಿಬ್ಬಂದಿಗೆ 'ಅನ್ ಕಂಫರ್ಟೆಬಲ್' ಸಮಸ್ಯೆ : ಮುಸ್ಲಿಂ ಪ್ರಯಾಣಿಕನನ್ನು ಕೆಳಗಿಳಿಸಿದ ವಿಮಾನ ಸಂಸ್ಥೆ

ಅಮೆರಿಕದಲ್ಲಿ ತಾರತಮ್ಯದ ಪ್ರಕರಣವೊಂದರಲ್ಲಿ 40 ವರ್ಷದ ಮುಸ್ಲಿಂ ವ್ಯಕ್ತಿಯನ್ನು ವಿಮಾನದಿಂದ ಹೊರಗೆ ಕಳುಹಿಸಲಾಗಿದೆ. ಸಾರ್ವಜನಿಕವಾಗಿ ಆತನ ಹೆಸರು ಕರೆದು, ಆತನ ಮೇಲೆ ನಿಗಾ ಇಡಲಾಗಿದೆ ಎಂದು ಸೀಟ್ ನಂಬರ್ ಉಲ್ಲೇಖಿಸಿ ವಿಮಾನ ಪರಿಚಾರಕರು ಅವಮಾನ ಮಾಡಿದ್ದಾರೆ.
ಮೊಹಮ್ಮದ್ ಅಹ್ಮದ್ ರಾದ್ವಾನ್ ಅರೆಬಿಕ್ ಮತ್ತು ಮುಸ್ಲಿಂ ಎಂದು ತಿಳಿದ ನಂತರ ಆತನನ್ನು ಅಮೆರಿಕನ್ ಏರ್‌ಲೈನ್ಸ್ ವಿಮಾನದಿಂದ ಹೊರಗೆ ಕಳುಹಿಸಲಾಗಿದೆ ಎಂದು ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ (ಸಿಎಐಆರ್) ದೂರು ಕೊಟ್ಟ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಅಮೆರಿಕದ ನಿಯಮಾವಳಿ ಪ್ರಕಾರ ಧರ್ಮ, ಪೂರ್ವಜರು ಮತ್ತು ರಾಷ್ಟ್ರೀಯ ಮೂಲ ಮೊದಲಾದ ವಿಚಾರದಲ್ಲಿ ವಿಮಾನ ಪ್ರಯಾಣಿಕರ ಮೇಲೆ ತಾರತಮ್ಯ ತೋರಿಸುವುದನ್ನು ನಿಷೇಧಿಸಲಾಗಿದೆ. ಸಿಎಐಆರ್ ಸಾರಿಗೆ ಇಲಾಖೆಗೆ ಈ ಬಗ್ಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸಿದೆ. ಪ್ರಮುಖ ವಿಮಾನಗಳ ಈ ನಡತೆಯನ್ನು ತಡೆಯುವಂತೆ ಕೋರಿದೆ. ಅಲ್ಲದೆ ಒಬ್ಬ ವ್ಯಕ್ತಿಯನ್ನು ವಿಮಾನದಿಂದ ಹೊರಗೆ ಕಳುಹಿಸುವ ಉದ್ದೇಶಗಳ ಬಗ್ಗೆ ಮಾರ್ಗದರ್ಶನಗಳಿರುವ ನೀತಿಯನ್ನು ಅಭಿವೃದ್ಧಿಪಡಿಸಬೇಕು ಎಂದೂ ಅದು ಒತ್ತಾಯಿಸಿದೆ. ಕೆಮಿಕಲ್ ಇಂಜಿನಿಯರ್ ಆಗಿರುವ ರಾದ್ವಾನ್ ಷಾರ್ಲೆಟ್‌ನಿಂದ ಡೆಟ್ರಾಯಿಟ್‌ಗೆ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ರಾದ್ವಾನ್ ವಿಮಾನದಲ್ಲಿ ಕುಳಿತುಕೊಳ್ಳುತ್ತಿದ್ದಂತೇ ವಿಮಾನ ಪರಿಚಾರಿಕೆ ಧ್ವನಿವರ್ಧಕದಲ್ಲಿ, ಮೊಹಮ್ಮದ್ ಅಹಮದ್, ಸೀಟ್ 25-ಎ, ನಾನು ನಿನ್ನನ್ನು ಗಮನಿಸುತ್ತಿದ್ದೇನೆ ಎಂದು ಕರೆದು ಘೋಷಿಸಿದ್ದಳು. ಹೀಗೆ ಮೂರು ಬಾರಿ ವಿಮಾನ ಪರಿಚಾರಿಕೆ ಇದೇ ವಾಕ್ಯವನ್ನು ಮರಳಿ ಹೇಳಿದ್ದಳು. ನನಗೆ ಆಘಾತವಾಗಿತ್ತು. 30 ವರ್ಷಗಳಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೂ ಇಂತಹ ಅನುಭವವಾಗಿಲ್ಲ ಎನ್ನುತ್ತಾರೆ ರಾದ್ವಾನ್.
ಇತರ ಯಾವುದೇ ಪ್ರಯಾಣಿಕರ ಬಗ್ಗೆ ಪರಿಚಾರಿಕೆ ಅಂತಹ ಘೋಷಣೆ ಕೂಗಿರಲಿಲ್ಲ. ರಾದ್ವಾನ್ ಈ ಘೋಷಣೆ ಏಕೆಂದು ಕೇಳಿದರೆ, ತಾನು ಎಲ್ಲರನ್ನೂ ಗಮನಿಸುತ್ತಿರುವುದಾಗಿ ಪರಿಚಾರಿಕೆ ಹೇಳಿದ್ದಳು. ಆದರೆ ತನ್ನ ಹೆಸರನ್ನು ಮಾತ್ರ ಕೂಗಿ ಹೇಳಿದ್ದೇಕೆ ಎಂದು ಕೇಳಿದರೆ, ಸಣ್ಣ ವಿಷಯದ ಬಗ್ಗೆ ದೊಡ್ಡದಾಗಿ ಪ್ರತಿಕ್ರಿಯಿಸುತ್ತಿದ್ದೀಯ ಎಂದು ಆಕೆ ಆರೋಪಿಸಿದ್ದಳು. ನಂತರ ಕೆಲವು ವಿಮಾನ ಸಿಬ್ಬಂದಿಗಳು ಆತನ ಜೊತೆ ಮಾತನಾಡಿದ ಮೇಲೆ ಪರಿಚಾರಿಕೆ ಆತನ ಬಗ್ಗೆ ಅನ್‌ಕಂಫರ್ಟೆಬಲ್‌ಅನಿಸುತ್ತದೆ ಎಂದು ಹೇಳಿ ಆತನನ್ನು ಹೊರಗೆ ಕಳುಹಿಸಲಾಗಿತ್ತು. ಇನ್ನೊಮ್ಮೆ ಅಮೆರಿಕನ್ ವಿಮಾನದಲ್ಲಿ ಪ್ರಯಾಣಿಸಲು ನನಗೆ ಬಹಳ ಮುಜುಗುರವಾಗಿದೆ ಎನ್ನುತ್ತಾರೆ ರಾದ್ವಾನ್. ನಂತರ ಬೇರೆ ವಿಮಾನ ಬುಕ್ ಮಾಡಿದ ಅವರಿಗೆ ನಷ್ಟವಾಗಿದೆಯಲ್ಲದೆ ಪ್ರಯಾಣದ ಯೋಜನೆಗಳೂ ಏರುಪೇರಾಗಿ್ದವು. ಭಯೋತ್ಪಾದಕನಂತೆ ತನ್ನನ್ನು ಕಂಡ ಬಗ್ಗೆ ಅವರು ಅಹಿತ ವ್ಯಕ್ತಪಡಿಸುತ್ತಾರೆ. ನಾನು 13 ವರ್ಷದಿಂದ ಅಮೆರಿಕದಲ್ಲಿ ನೆಲೆಸಿದ್ದೇನೆ. ಆದರೆ ಆಕ್ಷಣದಲ್ಲಿ ಅಮೆರಿಕದ ಪ್ರಜೆ ಎನ್ನುವ ಭಾವನೆ ನನ್ನಿಂದ ಕಸಿದುಕೊಂಡಂತೆ ಭಾಸವಾಗಿದೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್‌ನಲ್ಲಿ ಮುಸ್ಲಿಂ ಮಹಿಳೆಯನ್ನು ಸೌತ್‌ವೆಸ್ಟ್ ಏರ್‌ಲೈನ್ಸ್‌ನಿಂದ ಚಿಕಾಗೋ ನಿಲ್ದಾಣದಲ್ಲಿ ಹೊರಗೆ ಕಳುಹಿಸಲಾಗಿತ್ತು. ಆಕೆ ಸೀಟು ಬದಲಿಸುವಂತೆ ಹೇಳಿದ್ದೇ ಪರಿಚಾರಿಕೆಗೆ ಅನ್‌ಕಂಫರ್ಟೆಬಲ್‌ಅನಿಸಿದ ಕಾರಣ ಆಕೆಯನ್ನು ಹೊರ ಕಳುಹಿಸಲಾಗಿತ್ತು. ಮಾರ್ಚ್‌ನಲ್ಲಿ ಮುಸ್ಲಿಂ ಕುಟುಂಬವೊಂದರ ಬಾಹ್ಯ ನೋಟ ಚೆನ್ನಾಗಿಲ್ಲ ಎಂದು ಯುನೈಟೆಡ್ ಏರ್‌ಲೈನ್ಸ್ ವಿಮಾನದಿಂದ ಹೊರಕಳುಹಿಸಲಾಗಿತ್ತು.







