ಕಬಾಲಿ ಕ್ವಿಕ್ ರಿವ್ಯೂವ್
ಈ ಚಿತ್ರ ಕಟ್ಟಾ ರಜನಿ ಅಭಿಮಾನಿಗಳಿಗೆ

ಕಬಾಲಿಯ ರಜನೀಕಾಂತ್ ಜೀವನದಲ್ಲಿ ಒಂದು ದೊಡ್ಡ ಉದ್ದೇಶ ಈಡೇರಿಸಲು ಹೊರಟವನು. ವರ್ಷಗಳ ಹಿಂದೆ ಆತನಿಗೆ ಅನ್ಯಾಯವಾಗಿತ್ತು. ಅದಕ್ಕಾಗಿ ಕಬಾಲೀಸ್ವರಮ್ (ಕಬಾಲಿಯಲ್ಲಿ ರಜನೀಕಾಂತ್) ಸೇಡು ತೀರಿಸಲು ಹೊರಟವನು. ಆದರೆ ಆತ ಅದನ್ನು ಮಾಡುವ ಮೊದಲು ಪ್ರೇಕ್ಷಕಗಡಣವು ಸಂಪೂರ್ಣ ಎರಡೂವರೆ ಗಂಟೆಗಳ ಕಾಲ ರಜನೀಕಾಂತ್ ಸ್ಟೈಲ್, ಡೈಲಾಗ್ ಹಾಗೂ ನೃತ್ಯಗಳನ್ನು ಮನಸಾರೆ ತಣಿಯಬಹುದು.
ಕಬಾಲಿ ಬಗ್ಗೆ :
ಕಬಾಲಿ ಒಬ್ಬ ಕೆಲಸಗಾರನಾಗಿದ್ದು ತನ್ನ ಪತ್ನಿ (ರಾಧಿಕಾ ಆಪ್ಟೆ) ಹಾಗೂ ಪುತ್ರಿಯೊಂದಿಗೆ ಸುಖವಾಗಿ ಬಾಳುತ್ತಿದ್ದನು. ಆದರೆ ಬಹುಬೇಗನೇ ಎಲ್ಲವೂ ತಲೆಕೆಳಗಾಗಿ ನಮ್ಮ ಮುಗ್ಧ, ಶ್ರಮಜೀವಿ ಮನುಷ್ಯ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ತನ್ನ ಜೀವನವನ್ನು ಆತ ಹೇಗೆ ಕಾಪಾಡಿಕೊಳ್ಳುತ್ತಾನೆ ಹಾಗೂ ಮಲೇಷ್ಯಾದಲ್ಲಿ ತುಳಿತಕ್ಕೊಳಗಾಗಿರುವ ತಮಿಳರಿಗೆ ಹೇಗೆ ಸಹಾಯ ಮಾಡುತ್ತಾನೆಂಬುದೇ ಕಬಾಲಿ ಚಿತ್ರದ ಕಥೆ.
ರಜನೀಕಾಂತ್ ಅವರೇ ಈ ಚಿತ್ರದ ಜೀವಾಳ. ರಜನಿಯ ಚರಿಷ್ಮಾವೇ ಚಿತ್ರದಾದ್ಯಂತ ತನ್ನ ಛಾಪನ್ನು ಮೂಡಿಸಿದೆ. ಕೆಲವೊಂದು ಫ್ಲಾಶ್ ಬ್ಯಾಕ್ ದೃಶ್ಯಗಳಿಂದ ಹಿಡಿದು, ಡಾನ್ ಆಗಿ ತನ್ನ ವಯಸ್ಸಿನ ವ್ಯಕ್ತಿಯಾಗಿಯೇ ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ರಜನೀಕಾಂತ್ ಎಲ್ಲಿಯೂ ಪ್ರೇಕ್ಷಕರನ್ನು ನಿರಾಸೆಗೊಳಿಸುವುದಿಲ್ಲ. ಹಿಟ್ ಹಾಡು ನೆರುಪ್ಪುಡಾ ಹಾಡಿನ ದೃಶ್ಯ ಆರಂಭವಾಗುವಾಗ ಚಿತ್ರಮಂದಿರ ತುಂಬಾ ಶಿಳ್ಳೆ ಹಾಗೂ ಚಪ್ಪಾಳೆಗಳೇ ಕೇಳಿಸುತ್ತವೆ.
ಚಿತ್ರದ ಇತರ ತಾರಾಗಣವೂ ಉತ್ತಮವಾಗಿದ್ದು ರಾಧಿಕಾ ಆಪ್ಟೆ ಹಾಗೂ ಧನ್ಸಿಕಾ ತಮ್ಮ ಪಾತ್ರಗಳಿಗೆ ಜೀವ ತುಂಬುವಲ್ಲಿ ಸಫಲರಾಗಿದ್ದಾರೆ. ರಜನೀಕಾಂತ್ ಪತ್ನಿಯಾಗಿ ರಾಧಿಕಾರನ್ನು ಕಾಣುತ್ತಿರುವುದು ಮನಸ್ಸಿಗೆ ಮುದ ನೀಡುವುದಲ್ಲದೆ, ರಜನಿಯ ಈ ಹಿಂದಿನ ಚಿತ್ರಗಳಲ್ಲಿ ಹೀರೋಯಿನ್ ಗಳಿಗೆ ಸಣ್ಣ ಪಾತ್ರಗಳು ಮಾತ್ರವಿದ್ದುದರಿಂದ ಈ ಚಿತ್ರದಲ್ಲಿ ಆ ನಿಟ್ಟಿನಲ್ಲಿ ಬದಲಾವಣೆ ಗೋಚರಿಸುತ್ತದೆ. ರಜನೀಕಾಂತ್ ಹಾಗೂ ರಾಧಿಕಾ ಬಹಳ ಕಾಲದ ನಂತರ ಭೇಟಿಯಾಗುವ ದೃಶ್ಯ ನಿಮ್ಮನ್ನು ರೋಮಾಂಚನಗೊಳಿಸುವುದು ಖಂಡಿತಾ.
ಆದರೆ ಕಬಾಲಿಯ ನಿಧಾನಗತಿ ಹಾಗೂ ತೇಪೆಭರಿತ ನಿರೂಪಣೆ ಸ್ವಲ್ಪ ಮಟ್ಟಿಗೆ ನಿರಾಶಾದಾಯಕ. ಕೆಲವೊಮ್ಮೆ ಚಿತ್ರ ಮಂದಗತಿಯಲ್ಲಿ ಮುಂದುವರಿಯುತ್ತಿದೆಯೇನೋ ಎಂಬ ಭಾವನೆ ಬಂದು ಪ್ರೇಕ್ಷಕನ ಗಮನ ಬೇರೆಡೆಗೆ ಹರಿಯುವಂತಾಗುತ್ತದೆ. ಇದೊಂದು ಕಾರಣದಿಂದ ರಜನಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಈ ಚಿತ್ರ ಜನರ ನಿರೀಕ್ಷೆಗಳನ್ನು ತಲುಪುವಲ್ಲಿ ವಿಫಲವಾಗಿದೆಯೆಂದೇ ಹೇಳಬಹುದು.
ಆದರೂ ರಜನಿಯ ಕಟ್ಟಾ ಅಭಿಮಾನಿಗಳು ಈ ಚಿತ್ರದ ಪ್ರತಿ ಕ್ಷಣವನ್ನೂ ಆಸ್ವಾದಿಸಬಹುದು. ಇತರರಿಗೂ ಈ ಚಿತ್ರ ಇಷ್ಟವಾಗಬಹುದಾದರೂ ಕೆಲವೊಮ್ಮೆ ಚಿತ್ರದ ಗತಿ ಬಹಳ ನಿಧಾನವಾಗಿದೆಯೆಂಬ ಭಾವನೆ ಕಾಡಬಹುದು.
ಕೃಪೆ : ದಿ ಇಂಡಿಯನ್ ಎಕ್ಸ್‌ಪ್ರೆಸ್







