ತುಳು ಚಿತ್ರರಂಗವನ್ನು ತಲ್ಲಣಗೊಳಿಸಿದ ಪೈರಸಿ ಹಾವಳಿ: ದೂರು
.jpg)
ಮಂಗಳೂರು,ಜು.22: ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಚಿತ್ರರಂಗದಲ್ಲಿ ಸಾಮಾನ್ಯವಾಗಿದ್ದ ಪೈರಸಿ ಹಾವಳಿ ಇದೀಗ ತುಳು ಚಿತ್ರರಂಗವನ್ನೂ ತಲ್ಲಗೊಳಿಸಿದೆ. ದಬಕ್ ದಬಾ ಐಸಾ ಎಂಬ ತುಳು ಚಿತ್ರ ಬಿಡುಗಡೆಗೆ ಮೊದಲೇ ಸೋರಿಕೆಯಾಗಿದ್ದು, ಈ ಬಗ್ಗೆ ತುಳು ಚಲನಚಿತ್ರ ನಿರ್ಮಾಪಕರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಂಘದ ಟಿ.ಎ. ಶ್ರೀನಿವಾಸ್, ತುಳು ಚಿತ್ರರಂಗಕ್ಕೆ ಇದೊಂದು ತೀವ್ರತೆರನಾದ ಹೊಡೆತವಾಗಿದ್ದು, ಪ್ರಕರಣದ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ದ.ಕ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಮಹಾ ನಿರ್ದೇಶಕರು, ವಾರ್ತಾ ಮತ್ತು ಪ್ರಸಾರ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಲಿದೆ ಎಂದು ತಿಳಿಸಿದರು.
ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ತಯಾರಾದ ಈ ಚಿತ್ರ ಬಿಡುಗಡೆಯ ಎರಡು ವಾರಗಳ ಮೊದಲೇ ಕಾರ್ಕಳದ ಭವನೇಂದ್ರ ಕಾಲೇಜಿನ ವಿದ್ಯಾರ್ಥಿಗಳ ಮೊಬೈಲ್‌ಗಳಲ್ಲಿ ಹರಿದಾಡುತ್ತಿರುವುದು ಎರಡು ದಿನಗಳಿಂದ ಕಂಡು ಬಂದಿದೆ. ಸಿನೆಮಾ ಸೋರಿಕೆಯ ಮೂಲವನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ತನಿಖೆ ಆಗಬೇಕಾಗಿದೆ. ಸೋರಿಕೆಯು ಸ್ಟುಡಿಯೊ, ಸೆನ್ಸಾರ್ ಮಂಡಳಿ ಹಾಗೂ ಮಧ್ಯವರ್ತಿಗಳ ನಡುವೆ ಚಿತ್ರ ಸೆನ್ಸಾರ್ ಮಂಡಳಿಗೆ ತೆರಳುವ ಸಂದರ್ಭದಲ್ಲಿಯೇ ಯಾರಿಂದಲಾದರೂ ಸೋರಿಕೆ ಆಗಿರುವ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗುತ್ತಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ದೇವದಾಸ್ ಕಾಪಿಕಾಡ್, ಆರ್. ಧನರಾಜ್, ಕೋಶಾಧಿಕಾರಿ ದೇವದಾಸ್ ಕುಮಾರ್ ಪಾಂಡೇಶ್ವರ, ಪ್ರಕಾಶ್ ಪಾಂಡೇಶ್ವರ ಉಪಸ್ಥಿತರಿದ್ದರು.







