ಪತಿಯಂದಿರಿಗೆ ಮಚ್ಚು ತೋರಿಸಿ ಆದಿವಾಸಿ ಮಹಿಳೆಯರ ಅತ್ಯಾಚಾರ

ಕಲ್ಪಟ್ಟ, ಜುಲೈ 22: ಬೆಳ್ಳಂಬೆಳಗ್ಗೆ ಮನೆಯ ಬಾಗಿಲು ಒದ್ದು ಒಡೆದು ಹಾಕಿ ಒಳಗೆ ಪ್ರವೇಶಿಸಿದ ಇಬ್ಬರು ದುಷ್ಕರ್ಮಿಗಳು ಆದಿವಾಸಿ ಮಹಿಳೆಯರಿಬ್ಬರನ್ನು ಅವರ ಪತಿಯಂದಿರಿಗೆ ಕತ್ತಿ ತೋರಿಸಿ ಬೆದರಿಕೆಯೊಡ್ಡಿ ಅತ್ಯಾಚಾರವೆಸಗಿದ ಘಟನೆ ಕೇರಳದ ಕಲ್ಪಟ್ಟದಿಂದ ವರದಿಯಾಗಿದೆ. ರವಿವಾರ ಬೆಳಗ್ಗೆ ಐದು ಗಂಟೆಹೊತ್ತಿಗೆ ವೆಳ್ಳಮುಂಡ್ ವಾಳಾರಂಕುನ್ನ್ ಕಾಲನಿಗೆ ನುಗ್ಗಿದ ಇಬ್ಬರು ಆದಿ ವಾಸಿ ಸಹೋದರರಿಬ್ಬರಿಗೆ ಮಚ್ಚು ತೋರಿಸಿ ಹೆದರಿಸಿ ಅವರಿಬ್ಬರನ್ನೂ ಮನೆಯಿಂದ ಹೊರಗೆ ಹಾಕಿದ ಬಳಿಕ ಬಾಗಿಲು ಹಾಕಿ ಅವರಿಬ್ಬರ ಪತ್ನಿಯಂದಿರನ್ನು ಅತ್ಯಾಚಾರವೆಸಗಿದ್ದಾರೆನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪಡಿಞಾತ್ತರ ಎಂಬಲ್ಲಿನ ನಿವಾಸಿಗಳಾದ ರಾಮನ್, ನಾಸರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಇವರ ವಿರುದ್ಧ ಕಾಲನಿಯ ಸಹೋದರರಿಬ್ಬರ ಪತ್ನಿಯರನ್ನು ಅತ್ಯಾಚಾರಗೈದ ಆರೋಪ ಹೊರಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯರು ಮೂವತ್ತು, ಮೂವತ್ತೊಂದು ವರ್ಷದವರಾಗಿದ್ದಾರೆ ಎನ್ನಲಾಗಿದೆ. ಮನೆಯ ಎರಡು ಕೋಣೆಗಳಲ್ಲಿ ಇಬ್ಬರು ದಂಪತಿಗಳು ನಿದ್ರಿಸುತ್ತಿದ್ದಾಗ ಈ ಘಟನೆ ಸಂಭವಿಸಿದ್ದು. ಅತ್ಯಾಚಾರ ನಡೆಸಿದ ರಾಮನ್, ನಾಸರ್ ಶುಂಠಿಯ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಎನ್ನಲಾಗಿದೆ.
ರವಿವಾರ ಘಟನೆ ನಡೆದಿದ್ದರೂ ಅದು ಪ್ರಕರಣ ತಡವಾಗಿ ಬಹಿರಂಗವಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯರು ರವಿವಾರವೇ ದೂರು ನೀಡಿದ್ದರೂ ಪ್ರಕರಣ ದಾಖಲಿಸಲು ತಡಮಾಡಿದರೆಂದು ಪೊಲೀಸರ ವಿರುದ್ಧ ಆರೋಪ ಕೇಳಿಬಂದಿದೆ. ಅತ್ಯಾಚಾರ ನಡೆದು ಮೂರು ದಿನಗಳ ಬಳಿಕ ಮಹಿಳೆಯರನ್ನು ವೈದಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು ಅಲ್ಲಿ ಅತ್ಯಾಚಾರ ನಡೆದಿರುವುದು ಪತ್ತೆಯಾಗಿಲ್ಲ ಎನ್ನಲಾಗಿದೆ. ವೈದ್ಯಕೀಯ ಪರೀಕ್ಷೆಗೆ ತಡಮಾಡಿದ್ದು ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ ಎಂದುವರದಿಯಾಗಿದೆ.







