ಕೇಜ್ರಿವಾಲ್‌ರಿಂದ ಗುಜರಾತ್ ಮಾದರಿಯನ್ನು ಅಣಕಿಸಿ ಗೋವಿನ ಕಾರ್ಟೂನ್ !

ಹೊಸದಿಲ್ಲಿ,ಜುಲೈ 22: ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಗೋವಿನ ಕಾರ್ಟೂನ್ ಪೋಸ್ಟ್ ಮಾಡುವ ಮೂಲಕ ಗುಜರಾತ್‌ನ ಬಿಜೆಪಿ ಸರಕಾರ ಹಾಗೂ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ್ದಾರೆಂದು ವರದಿಯಾಗಿದೆ. ಕೇಜ್ರಿವಾಲ್ ಇಂದು ಕಾರ್ಟೂನ್ ಪೋಸ್ಟ್ ಮಾಡಿದ್ದು ಅದರ ಮೂಲಕ ಗುಜರಾತ್ ಮಾದರಿಯನ್ನು ಗೇಲಿಮಾಡಿದ್ದು ಅವರು ಪೋಸ್ಟ್ ಮಾಡಿದ ಕಾರ್ಟೂನ್ ನಲ್ಲಿ ಗೋವು ಜನರ ಮೇಲೆ ಹಾಯುತ್ತಿರುವಂತೆ ತೋರಿಸಲಾಗಿದೆ. ಹತ್ತಿರದಲ್ಲಿರುವ ಜನರು ಕೌವ್ ವಾಕ್ ಎಂದು ಬೊಬ್ಬೆಹೊಡೆಯುತ್ತಿದ್ದಾರೆ.
ಕೇಜ್ರಿವಾಲ್ ಕಾರ್ಟೂನ್ ಮೂಲಕ ಗುಜರಾತ್‌ನಲ್ಲಿ ದಲಿತರ ಮೇಲೆ ನಡೆದ ಹಲ್ಲೆಯನ್ನು ಉಲ್ಲೇಖಿಸಿದ್ದಾರೆಎನ್ನಲಾಗಿದೆ. ಅಲ್ಲಿ ಸತ್ತದನದ ಚರ್ಮ ಸುಲಿದ ಆರೋಪದಲ್ಲಿ ದಲಿತಕುಟುಂಬವೊಂದರ ಮೇಲೆ ದಾರುಣವಾಗಿ ಹಲ್ಲೆ ನಡೆಸಲಾಗಿತ್ತು. ನಂತರ ಗುಜರಾತ್‌ನಲ್ಲಿ ದಲಿತರಿಂದ ಪ್ರತಿಭಟನೆ ನಡೆಯುತ್ತಿದ್ದು ಕೆಲವರು ಆತ್ಮಹತ್ಯೆಗೂ ಯತ್ನಿಸಿದ ಘಟನೆ ವರದಿಯಾಗಿತ್ತು. ಪೊಲೀಸರು ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ.
ಕೇಜ್ರಿವಾಲ್ ಶುಕ್ರವಾರ ದಲಿತರ ಕುಟುಂಬವನ್ನು ಭೇಟಿಮಾಡಲಿಕ್ಕಾಗಿ ಗುಜರಾತ್‌ಗೆ ಹೋಗಿದ್ದು ದಲಿತರಲ್ಲಿ ಅವರ ಪರಿಸ್ಥಿತಿಯನ್ನು ವಿಚಾರಿಸಿ ತಿಳಿದುಕೊಂಡಿದ್ದಾರೆನ್ನಲಾಗಿದೆ. ಮಾತ್ರವಲ್ಲ ದಲಿತರಿಗೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಗುಜರಾತ್ ಸರಕಾರ ದಲಿತರ ಮೇಲೆ ದಬ್ಬಾಳಿಕೆಗಿಳಿದಿದೆ ಎಂದು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.





