ಸಾರ್ವಜನಿಕ ನಿಧಿಯ ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಸಂಗ್ರಹಿಸಲು ಸರಕಾರದ ಚಿಂತನೆ
ಹೊಸದಿಲ್ಲಿ, ಜು.22: ಸಾರ್ವಜನಿಕ ನಿಧಿಯ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಪೂರ್ಣಗೊಂಡಿರುವ ಮಾರ್ಗಗಳಿಗೆ ಟೋಲ್ ವಿಧಿಸುವ ಪ್ರಸ್ತಾವವೊಂದು ಪರಿಶೀಲನೆಯಲ್ಲಿದೆಯೆಂದು ಗುರುವಾರ ಸಂಸತ್ತಿಗೆ ತಿಳಿಸಲಾಗಿದೆ.
ಬಳಕೆದಾರ ಶುಲ್ಕದ ನಿರೀಕ್ಷಿತ ಸಂಗ್ರಹದ ಆಧಾರದಲ್ಲಿ, ಖಾಸಗಿ ವಲಯದ ಸಾಮರ್ಥ್ಯ ಹಾಗೂ ಕೌಶಲವನ್ನು ಬಳಸಿ, ಟೋಲ್-ಸಂಚಾಲನೆ ವರ್ಗಾವಣೆ ಮಾದರಿಯಲ್ಲಿ ಪೂರ್ಣಗೊಂಡಿರುವ ಸಾರ್ವಜನಿಕ ನಿಧಿಯ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಟೋಲ್ ಸಂಗ್ರಹದ ಪ್ರಸ್ತಾವವೊಂದು ಸಕ್ರಿಯ ಪರಿಶೀಲನೆಯಲ್ಲಿದೆಯೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಹಾಯಕ ಸಚಿವ ಪೊನ್ ರಾಧಾಕೃಷ್ಣನ್ ಲೋಕಸಭೆಗೆ ನೀಡಿದ ಲಿಖಿತ ಉತ್ತರವೊಂದರಲ್ಲಿ ಹೇಳಿದರು.
ಈ ರೀತಿ ಸಂಗ್ರಹವಾದ ಹಣವನ್ನು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ಸಂಚಾಲನೆ ಹಾಗೂ ಸಂರಕ್ಷಣೆಗಾಗಿ ಬಳಸಲಾಗುವುದೆಂದು ಅವರು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಹಾಗೂ ಸಂರಕ್ಷಣೆಗಾಗಿ ರೂ. 25 ಸಾವಿರ ಕೋಟಿ(ತೆರಿಗೆ ಹೇರಬಲ್ಲ) ಹಾಗೂ ರೂ. 5 ಸಾವಿರ ಕೋಟಿ(54 ಇಸಿ) ಎತ್ತುವಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಈಗಾಗಲೇ ಅಧಿಕಾರ ನೀಡಲಾಗಿದೆ.