ಹೈಟೆಕ್ ವೇಶ್ಯಾವಾಟಿಕೆ ಜಾಲ ಬೇಧಿಸಿದ ಪೊಲೀಸರು : ಇನ್ಸ್‌ಪೆಕ್ಟರ್ ಕಲಾವತಿ ನೇತೃತ್ವದಲ್ಲಿ ಯಶಸ್ವೀ ಕಾರ್ಯಾಚರಣೆ

ಮಂಗಳೂರು, ಜು. 22: ಅಂತರ್‌ಜಾಲದ ಮೂಲಕ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವೊಂದನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಇನ್ಸ್‌ಪೆಕ್ಟರ್ ಕಲಾವತಿ ನೇತೃತ್ವದ ಮಹಿಳಾ ಪೊಲೀಸ್ ತಂಡವು ಈ ಸಂಬಂಧ ಓರ್ವನನ್ನು ಬಂಧಿಸಿದೆ.
ಈ ಬಗ್ಗೆ ಇಂದು ಸಂಜೆ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರು, ಪ್ರಕರಣಕ್ಕೆ ಸಂಬಂಧ ಬೆಂಗಳೂರಿನ ಕಾಡುಗೋಡಿ ನಿವಾಸಿ ಶಬರಿ ಯಾನೆ ವಿಕ್ರಮ್ (26) ಎಂಬಾತನನ್ನು ಬಂಧಿಸಿರುವುದಾಗಿ ತಿಳಿಸಿದರು.
ಜುಲೈ 21ರಂದು ಹಂಪನಕಟ್ಟೆ ಬಸ್ಸು ನಿಲ್ದಾಣ ಬಳಿಯ ಸೂರ್ಯ ಲಾಡ್ಜ್‌ನ ಒಂದನೆ ಮಹಡಿಯಲ್ಲಿರುವ ರೂಂ. ನಂಬ್ರ 103ರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಮಹಿಳಾ ಠಾಣಾ ಇನ್ಸ್‌ಪಕ್ಟೆರ್ ಕಲಾವತಿ ನೇತೃತ್ವದ ತಂಡವು ಈ ಸಂಬಂಧ ವಿಕ್ರಮ್‌ನನ್ನು ಬಂಧಿಸಿದೆ. ಈ ಬಗ್ಗೆ ಆರೋಪಿಯನ್ನು ವಿಚಾರಿಸಲಾಗಿ, ಆತ ‘ಲೊಕ್ಯಾಂಟೊ’ ಎಂಬ ಮಾರ್ಕೆಟಿಂಗ್ ವೆಬ್‌ಸೈಟ್‌ವೊಂದನ್ನು ಸ್ಥಾಪಿಸಿದ್ದು, ಈ ವೆಬ್‌ಸೈಟ್‌ನ್ನು ದುರುಪಯೋಗಪಡಿಸಿ ಸಂಪರ್ಕಿಸುವ ಮೊಬೈಲ್ ಸಂಖ್ಯೆಯನ್ನು ನೀಡಿ ಈ ವೆಬ್‌ಸೈಟ್ ಮುಖಾಂತರ ಹುಡುಗಿಯರ ಬಗ್ಗೆ ಮಾಹಿತಿ ಹಾಕಿ ಗ್ರಾಹಕರನ್ನು ಆಕರ್ಷಿಸಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ವೇಶ್ಯಾವೃತ್ತಿ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಚಂದ್ರಶೇಖರ್ ವಿವರಿಸಿದರು.
ವಿಕ್ರಮ್ ಕೆಲವು ವರ್ಷಗಳಿಂದ ಕೆಟರಿಂಗ್ ಕೆಲಸ ಮಾಡಿಕೊಂಡಿದ್ದು, ಎರಡು ವರ್ಷಗಳಿಂದ ಬೆಂಗಳೂರು ಹಾಗೂ ಮಂಗಳೂರು ಮತ್ತಿತರ ಕಡೆಗಳಲ್ಲಿ ಯುವತಿಯರನ್ನು ತನ್ನ ಜಾಲಕ್ಕೆ ಸೆಳೆದು ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ. ಪ್ರಕರಣದಲ್ಲಿ ಈತನೊಂದಿಗೆ ಮಂಜುನಾಥ್ ಯಾನೆ ಮಂಜು ಎಂಬಾತ ಪ್ರಮುಖ ಪಾತ್ರ ವಹಿಸಿದ್ದು, ಇತರ ಇಬ್ಬರು ಮಹಿಳೆಯರೂ ಶಾಮೀಲಾಗಿದ್ದಾರೆ. ಇವರ ಪತ್ತೆ ಕಾರ್ಯ ಮುಂದುವರಿದಿದೆ. ವಿಕ್ರಮ್ ಹಾಗೂ ಮಂಜುನಾಥ್ ತಮ್ಮ ಮೊಬೈಲ್ ಸಂಖ್ಯೆಗಳನ್ನು ಲೊಕ್ಯಾಂಟೊ ಎಂಬ ಖಾಸಗಿ ವರ್ಗೀಕೃತ ಜಾಹೀರಾತು ವೆಬ್‌ಸೈಟ್‌ನಲ್ಲಿ ಜಾಹೀರಾತು ಹಾಕಿ ಗ್ರಾಹಕರನ್ನು ವೇಶ್ಯಾವಾಟಿಕೆಗೆ ಆಹ್ವಾನಿಸಿದ್ದು, ಲೊಕ್ಯಾಂಟೊ ಕ್ಲಾಸಿಫೈಡ್ಸ್ ವಿರುದ್ಧವೂ ತನಿಖೆ ನಡೆಯುತ್ತಿದ್ದು, ಸೈಬರ್ ಅಪರಾಧಗಳ ತಜ್ಞರ ನೆರವನ್ನು ಕೋರಲಾಗಿದೆ ಎಂದು ಅವರು ತಿಳಿಸಿದರು.
ತಂಡಕ್ಕೆ ಬಹುಮಾನ ಕಾರ್ಯಾಚರಣೆಯ ನೇತೃತ್ವ ವಹಿಸಿದ ಮಹಿಳಾ ಠಾಣಾ ಇನ್ಸ್‌ಪೆಕ್ಟರ್ ಕಲಾವತಿ ಅವರಿಗೆ 2000 ರೂ. ನಗದು ಹಾಗೂ ಪ್ರಶಂಸಾ ಪತ್ರ ಮತ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಎಸ್‌ಐ ಪೂರ್ಣಿಮಾ, ಸಿಬ್ಬಂದಿಗೆ ತಲಾ 1500 ನಗದು ಮತ್ತು ಪ್ರಶಂಸ ಪತ್ರವನ್ನು ನೀಡಿ ಪುರಸ್ಕರಿಸುವುದಾಗಿ ಕಮಿಷನರ್ ತಿಳಿಸಿದರು.
ಡಿಸಿಪಿಗಳಾದ ಶಾಂತಾರಾಂ, ಡಾ.ಸಂಜೀವ ಪಾಟೀಲ್ ಮತ್ತು ಎಸಿಪಿ ಉದಯ್ ನಾಯಕ್ ಉಪಸ್ಥಿತರಿದ್ದರು.







