ಯೆನೆಪೋಯ ಕಾಲೇಜಿನಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ

ಮೂಡುಬಿದಿರೆ: ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಬೋಧನೆ ಹಾಗೂ ಸಂಶೋಧನಾ ವಿಧಾನ’ ಕುರಿತು ಬೋಧಕರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಶುಕ್ರವಾರ ನಡೆಯಿತು. ಮಂಗಳೂರು ಕೆಪಿಟಿಯ ಎಂ.ಇ ವಿಭಾಗದ ಮುಖ್ಯಸ್ಥ ಅಬ್ದುಲ್ ಖಾದರ್.ಎ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ತಂತ್ರಜ್ಞಾನದ ಯಾವುದೇ ಸಾಧನವು ಶಿಕ್ಷಕರ ಸ್ಥಾನವನ್ನು ತುಂಬುವುದಿಲ್ಲ. ತಂತ್ರಜ್ಞಾನವನ್ನು ಕಲಿಕೆಗೆ ಪರ್ಯಾಯವಾಗಿ ಬಳಸಬಹುದಷ್ಟೆ. ಬೋಧನೆ ಎನ್ನುವುದು ಸಂಕೀರ್ಣವಾದದ್ದು. ಬಾಹ್ಯ ವಿಷಯಗಳನ್ನು ಅದು ತಿಳಿಸುವುದಲ್ಲ. ನಮ್ಮೊಳಗಿನ ಚಿಂತನೆಗಳನ್ನು ಜಾಗೃತಗೊಳಿಸುವುದಾಗಿದೆ. ಮುಖಾಮುಖಿ ಕಲಿಕಾವಿಧಾನ ಪರಿಣಾಮಕಾರಿಯಾದದ್ದು. ತಂತ್ರಜ್ಞಾನ ಸಹಿತ ಶಿಕ್ಷಣದಲ್ಲಿನ ಬದಲಾವಣೆಗೆ ಸರಿಸಮಾನವಾಗಿ ಕಲಿಕಾ ವಿಧಾನದಲ್ಲಿ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದು ಅಗತ್ಯ ಎಂದರು. ದಾವಣಗೆರೆಯ ಬಿಡಿಟಿ ಕಾಲೇಜಿನ ಎಂ.ಇ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ ಸಿ.ಜಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ ಡಿ’ಸೋಜಾ ಅಧ್ಯಕ್ಷತೆವಹಿಸಿದರು. ಪ್ರೊ.ಸತೀಶ್ ಸ್ವಾಗತಿಸಿದರು. ಶಂಕರ್ ಉಪಾಧ್ಯಾಯ ಅತಿಥಿ ಪರಿಚಯ ಮಾಡಿದರು. ನಿಶಾ ಹಾಗೂ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಶಿವಲಿಂಗಪ್ಪ ವಂದಿಸಿದರು.






