ತೆಂಕಮಿಜಾರಿನಲ್ಲಿ ಭಿನ್ನ ಸಾಮರ್ಥ್ಯರೊಂದಿಗೆ ಒಂದು ಆತ್ಮೀಯ ಕೂಟ

ಮೂಡುಬಿದಿರೆ, ಜು.22: ಭಿನ್ನ ಸಾರ್ಮರ್ಥ್ಯರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವಂತಹ ಕೆಲಸ ದೇವರು ಮೆಚ್ಚುವ ಕೆಲಸ. ಭಿನ್ನ ಸಾಮರ್ಥ್ಯರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿ ಅವರ ಜೀವನೋತ್ಸವವನ್ನು ಹೆಚ್ಚಿಸಿ ಮುಖ್ಯವಾಹಿನಿಯತ್ತ ಸೆಳೆಯುವಂತಹ ಕಾರ್ಯಕ್ರಮವನ್ನು ತೆಂಕಮಿಜಾರು ಗ್ರಾಮ ಪಂಚಾಯತ್ ಆಯೋಜಿಸಿರುವುದು ಪ್ರಶಂಸನೀಯ. ಇಂತಹ ಕಾರ್ಯಕ್ರಮಗಳನ್ನು ಪ್ರತಿ ಗ್ರಾಮ ಪಂಚಾಯತ್‌ಗಳು ಇಂತಹ ಕೆಲಸಗಳನ್ನು ಮಾಡಿದರೆ ಭಿನ್ನ ಸಾಮರ್ಥ್ಯರಿಗೆ ಅನುಕೂಲವಾಗುತ್ತದೆ ಎಂದು ಶಾಸಕ, ಮಾಜಿ ಸಚಿವ ಕೆ.ಅಯಚಂದ್ರ ಹೇಳಿದರು.
ಅವರು ತೆಂಕಮಿಜಾರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ತೋಡಾರಿನ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಪಂಚಾಯತ್ ವ್ಯಾಪ್ತಿಯಲ್ಲಿರುವ ವಿಕಲಚೇತನರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ ಅವರ ಜೀವನೋತ್ಸಾಹವನ್ನು ಹೆಚ್ಚಿಸುವ ಅಂಗವಾಗಿ ಏರ್ಪಡಿಸಿರುವ ಭಿನ್ನ ಸಾಮರ್ಥ್ಯರೊಂದಿಗೆ ಒಂದು ಆತ್ಮೀಯ ಕೂಟ ಹಾಗೂ ಸರಕಾರದ ಆದೇಶದಂತೆ ನಾಗರಿಕರಿಗೆ ವಿವಿಧ ಸೇವೆಗಳನ್ನು ಒದಗಿಸುವ ಏಕಗವಾಕ್ಷಿ ಯೋಜನೆಯಾದ ಪಂಚಾಯತ್-100-ಬಾಪೂಜಿ ಸೇವಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ, ಪಂಚಾಯತ್ ಅಧ್ಯಕ್ಷರಿಗೆ ಪಹಣಿಪತ್ರವನ್ನು ವಿತರಿಸಿ ಮಾತನಾಡಿದರು.
ಪಂಚಾಯತ್ ಸದಸ್ಯರು ಬಡಜನರ ಸೇವೆಗಳಿಗೆ ಸ್ಪಂದಿಸುವಲ್ಲಿ ಆಸಕ್ತಿ ವಹಿಸಬೇಕಾಗಿದೆ. ಮನೆ, ನಳ್ಳಿ ನೀರಿನ ವ್ಯವಸ್ಥೆ, ದಾರಿದೀಪ ಹಾಗೂ ಪಡಿತರ ಸಹಿತ ಇತರ ಅಗತ್ಯ ಕೆಲಸಗಳನ್ನು ಮಾಡುವಲ್ಲಿ ಸದಸ್ಯರು ಯಾವಾಗಲೂ ಮುಂಚೂಣಿಯಲ್ಲಿರಬೇಕೆಂದು ಸಲಹೆ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ತಾವು ಎಲ್ಲರಿಗೂ ವೈಯಕ್ತಿಕ ಸಹಾಯವನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಂಚಾಯತ್ ಮೂಲಕ ಪಡೆದು ಬಿನ್ನಚೇತನರಿಗೆ ಸಿಗುವಂತೆ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಇದಕ್ಕೆ ಲಯನ್ಸ್ ಕ್ಲಬ್ ಸಹಕಾರದೊಂದಿಗೆ ಒಂದು ವಾರದಲ್ಲಿಯೇ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ನಿಟ್ಟಿನಲ್ಲಿ ಭಿನ್ನ ಸಾಮರ್ಥ್ಯದವರ ಮನೆ ಮನೆಗೆ ತೆರಳಿ ಅವರನ್ನು ಗುರುತಿಸಿ ಸರಕಾರದಿಂದ ಸಿಗುವ ಸವಲತ್ತುಗಳ ಮಾಹಿತಿಯನ್ನು ನೀಡಿದ್ದೇವೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ್ ಶೆಟ್ಟಿ ಮರಿಯಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಿನ್ನ ಸಾಮರ್ಥ್ಯರಿಗೆ ಸಹಾಯಧನದ ಚೆಕ್ ವಿತರಿಸಿ ಭಿನ್ನ ಸಾಮರ್ಥ್ಯದವರು ಶಿಕ್ಷಣವನ್ನು ಪಡೆದು ಆತ್ಮವಿಶ್ವಾಸದೊಂದಿಗೆ ಸ್ವಾವಲಂಬಿ ಬದುಕನ್ನು ಸಾಗಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಲಯನ್ಸ್ ಕ್ಲಬ್ ಸದಾ ನಿಮಗೆ ಪ್ರೋತ್ಸಾಹ ನೀಡಲು ಸಿದ್ಧ ಎಂದು ಹೇಳಿದರು.
ಮುಖವಾಡ ತಯಾರಿಸುವ ಮೂಲಕ ಗ್ರಾಮದಲ್ಲಿ ವಿಶೇಷ ಸಾಧನೆ ಮಾಡಿರುವ ಬಾಬು ಪರವ, ಶ್ರೀಮತಿ ಅಪ್ಪಾಜಿ ಸ್ಮಾರಕ ಆಳ್ವಾಸ್ ವಿಶೇಷ ಶಾಲೆಯ ಪರವಾಗಿ ಶಾಲೆಯ ಮುಖ್ಯ ಶಿಕ್ಷಕಿ ಅನಿತಾರನ್ನು ಗೌರವಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಜೈನ ಪ್ರೌಢಶಾಲೆಯ ಶಿಕ್ಷಕ ನಿತೇಶ್ ಬಳ್ಳಾಲ್ ಜೀವನೋತ್ಸಾಹದ ಮಾತುಗಳು, ಪತ್ರಕರ್ತ ಕಿರಣ್ ಮಂಜನಬೈಲು ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ 50ರಿಂದ 60ರಷ್ಟು ಜನ ವಿಕಲಚೇತನರಿದ್ದಾರೆ. ಇವರೆಲ್ಲರೂ ಸರಕಾರದ ವಿವಿಧ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು. ವಿಕಲಚೇತನರ ಅಭಿವೃದ್ಧಿಗಾಗಿ ಸರಕಾರದಿಂದ ಮನೆಗೆ, ಕಿವಿ ಕೇಳದವರಿಗೆ ಮಿಷಿನ್, ದೃಷ್ಟಿ ದೋಷ ಇರುವವರಿಗೆ ಸೌಲ್ಯ, ಸ್ವ ಉದ್ಯೋಗಕ್ಕೆ, ಹೈನುಗಾರಿಕೆ, ವಾಹನಕ್ಕೆ ಅನುದಾನಗಳನ್ನು ಪಡೆಯಲು ಅವಕಾಶವಿದೆ ಎಂದು ತಿಳಿಸಿದರು. ರಾಕೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







