ಸ್ತ್ರೀಪರ ಕಾನೂನುಗಳ ಯಶಸ್ಸಿಗೆ ಕಾಳಜಿ ಅಗತ್ಯ: ಯಶವಂತ್
‘ಹೆಣ್ಣು ಮಗುವನ್ನು ಉಳಿಸಿ’ ಅಭಿಯಾನ

ಹೊನ್ನಾವರ, ಜು.22: ಸ್ತ್ರೀಪರ ಕಾನೂನುಗಳು ಯಶಸ್ವಿಯಾಗಲು ಸ್ತ್ರೀಪರ ಕಾಳಜಿಯ ಮನಸ್ಸುಗಳು ಬೇಕು ಎಂದು ಹೊನ್ನಾವರ ಸಿವಿಲ್ ನ್ಯಾಯಾಧೀಶ ಯಶವಂತ ಕುಮಾರ್ ಅಭಿಪ್ರಾಯಪಟ್ಟರು.
ಅವರು ತಾಲೂಕು ಕಾನೂನು ಸೇವಾ ಸಮಿತಿ ಹೊನ್ನಾವರ, ವಕೀಲರ ಸಂಘ, ಸೈಂಟ್ ಥೋಮಸ್ ಹೈಸ್ಕೂಲ್ ಹೊನ್ನಾವರ ಇವರ ಸಂಯುಕ್ತಾಶ್ರಯದಲ್ಲಿ ಕಾನೂನು ಕಾರ್ಯಕ್ರಮ ಸಾಕ್ಷರತಾ ಕಾರ್ಯಕ್ರಮದ ಅಂಗವಾಗಿ ‘ಹೆಣ್ಣು ಮಗುವನ್ನು ಉಳಿಸಿ’ ಅಭಿಯಾನ ಉದ್ಘಾಟಿಸಿ ಮಾತನಾಡುತ್ತಿದ್ದರು. ಹೆಣ್ಣು ಮಗು ಉಳಿಸಿ ಹೆಣ್ಣು ಮಗುವನ್ನು ಸುಶಿಕ್ಷಿತಗೊಳಿಸಿದಾಗ ಸ್ತ್ರೀ ಶೋಷಣೆ ಯಶಸ್ವಿಯಾಗಿ ತಡೆಯಲು ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಭಟ್ ಮಾತನಾಡಿ, ಸ್ತ್ರೀಪರ ಕಾಳಜಿಯ ಕಾನೂನೆಂದರೆ ಪುರುಷ ಶೋಷಕನೆಂದರ್ಥವಲ್ಲ. ಸ್ತ್ರೀ ಪುರುಷರಿಬ್ಬರೂ ಸಮಾನರು ಎಂಬ ಎಚ್ಚರಿಕೆಯನ್ನು ಸ್ತ್ರೀಪರ ಕಾನೂನುಗಳು ನೀಡುತ್ತವೆ. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿಯೇ ಸ್ತ್ರೀ ಶೋಷಣೆ, ಹೆಣ್ಣಿಗೆ ಆಗುವ ಅನ್ಯಾಯ ಖಂಡಿಸುವ ಗುಣ ಅಳವಡಿಸಿಕೊಳ್ಳಬೇಕು ಎಂದು ಕರೆನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನ್ಯಾಯವಾದಿ ಉಮಾ ಡಿ ನಾಯ್ಕ ಸ್ತ್ರೀಪರ ಕಾಳಜಿಯ ಕಾನೂನುಗಳ ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಚರ್ಚೆಯಲ್ಲಿ ಭಾಗವಹಿಸಿದರು. ವಕೀಲ ಸಂಘದ ಅಧ್ಯಕ್ಷ ಕೆ.ವಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ. ಎಸ್. ಹರಿಣಿ, ಸೈಂಟ್ ಥೋಮಸ್ ಹೈಸ್ಕೂಲ್ ಮುಖ್ಯೋಪಾಧ್ಯಾಯ ಎಸ್.ವೈ ಬೈಲೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.





