ಪ್ರಪ್ರಥಮ ಜನಸಂಪರ್ಕ ಸಭೆಗೆ ಉತ್ತಮ ಪ್ರತಿಕ್ರಿಯೆ
ಸಚಿವರಿಗೆ ಎದುರಾದ ಸಾಲುಸಾಲು ಸಮಸ್ಯೆ ಅರ್ಜಿಗಳು

ಶಿವಮೊಗ್ಗ, ಜು. 22: ಪ್ರಪ್ರಥಮ ಬಾರಿಗೆ ಶುಕ್ರವಾರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪನವರು ಜನಸಂಪರ್ಕ ಹಾಗೂ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ನಡೆಸಿದರು. ಸಭೆಯಲ್ಲಿ ಸಾಲುಸಾಲು ಸಮಸ್ಯೆಗಳ ಅರ್ಜಿಗಳು ಸಲ್ಲಿಕೆಯಾದವು. ಇದರಲ್ಲಿ ಬಗರ್‌ಹುಕುಂ ಸಾಗುವಳಿಗೆ ಸಂಬಂಧಿಸಿದ ಅರ್ಜಿಗಳ ಸಂಖ್ಯೆಯೇ ಹೆಚ್ಚಾಗಿ ಕಂಡುಬಂದಿತು. ನಗರದ ಅಂಬೇಡ್ಕರ್ ಭವನದಲ್ಲಿ ಈ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 10:45 ಕ್ಕೆ ಆರಂಭವಾದ ಸಭೆಯು ಮಧ್ಯಾಹ್ನ 1 ಗಂಟೆಯವರೆಗೂ ನಡೆಯಿತು. ಆದರೆ ಸಮಯಾವಕಾಶದ ಕೊರತೆಯಿಂದ ಸಚಿವರು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಅಹವಾಲು ಆಲಿಸಲು ಸಾಧ್ಯವಾಗಲಿಲ್ಲ. ಉಳಿದ ಅರ್ಜಿಗಳನ್ನು ಖುದ್ದು ಸಚಿವರೇ ಪರಿಶೀಲಿಸಿ ಸೂಕ್ತ ಪರಿಹಾರ ಕಲ್ಪಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯೇಕ ವ್ಯವಸ್ಥೆ: ಸಾರ್ವಜನಿಕರ ಅಹವಾಲು ಅರ್ಜಿಗಳ ನೋಂದಣಿೆಗೆ ಅಂಬೇಡ್ಕರ್ ಭವನದ ಹೊರಭಾಗದಲ್ಲಿ ಕೌಂಟರ್ ತೆರೆಯಲಾಗಿತ್ತು. ಹಿಂಬರಹ ಕೂಡ ನೀಡಲಾಗುತ್ತಿತ್ತು. ಈ ರೀತಿ ಅರ್ಜಿ ಸಲ್ಲಿಸಿದ ನಾಗರಿಕರು, ಸಂಘ ಸಂಸ್ಥೆಗಳ ಮುಖಂಡರನ್ನು ಸರದಿ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಅಹವಾಲು ತೋಡಿಕೊಳ್ಳಲು ಅವಕಾಶ ಮಾಡಿಕೊಟ್ಟು ಮೈಕ್ ಮೂಲಕ ಅರ್ಜಿದಾರರ ಹೆಸರುಗಳನ್ನು ಪ್ರಕಟಿಸಲಾಯಿತು. ಜಿಲ್ಲಾಡಳಿತ ಮಾಡಿಕೊಂಡಿದ್ದ ಈ ಎಲ್ಲ ಪೂರ್ವಭಾವಿ ಮುನ್ನೆಚ್ಚರಿಕೆ ಕ್ರಮಗಳಿಂದ ಸಭೆಯಲ್ಲಿ ಯಾವುದೇ ಗೊಂದಲ-ಗಡಿಬಿಡಿಗೆ ಆಸ್ಪದವಾಗಲಿಲ್ಲ. ಇದರಿಂದ ಇಡೀ ಪ್ರಕ್ರಿಯೆ ಗೌಜು-ಗದ್ದಲಗಳಿಗೆ ಆಸ್ಪದವಾಗದೆ ಸುಗಮ, ಶಾಂತಿಯುತವಾಗಿ ನಡೆಯುವಂತಾಯಿತು. ಆಲಿಕೆ: ಪ್ರತಿಯೋರ್ವ ಅರ್ಜಿದಾರರ ಅಹವಾಲುಗಳನ್ನು ಸಚಿವ ಕಾಗೋಡು ತಿಮ್ಮಪ್ಪ ಕೂಲಂಕಷವಾಗಿ ಆಲಿಸಿ, ಕಾಲಮಿತಿಯಲ್ಲಿ ಸೂಕ್ತ ಕ್ರಮ ಜರಗಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದರು. ಕೈಗೊಂಡ ಕ್ರಮದ ಬಗ್ಗೆ ತಮಗೆ ಮಾಹಿತಿ ನೀಡುವಂತೆಯೂ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದರು. ಕೆಲ ಅರ್ಜಿದಾರರನ್ನು ಸಚಿವರು ತರಾಟೆಗೂ ತೆಗೆದುಕೊಂಡರು. ಮತ್ತೆ ಕೆಲ ಅರ್ಜಿದಾರರಿಗೆ ಸಲಹೆ-ಸೂಚನೆ ನೀಡಿದರು.
ಬಗರ್‌ಹುಕುಂ ಹೆಚ್ಚು:
ಶಿವಮೊಗ್ಗ ನಗರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಕಡಿಮೆಯಿತ್ತು. ತಾಲೂಕಿನ ಗ್ರಾಮೀಣ ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದರು. ಸರಕಾರಿ ಹಾಗೂ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಬಗರ್‌ಹುಕುಂ ಸಾಗುವಳಿದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಉಳಿದಂತೆ ಇತರ ಸಮಸ್ಯೆಗಳ ಬಗ್ಗೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಕಡಿಮೆಯಿತ್ತು. ಸಭೆೆಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕಾ, ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸೂಡಾಧ್ಯಕ್ಷ ಎನ್.ರಮೇಶ್, ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ನಗರದ ಮಹದೇವಪ್ಪ ಮತ್ತಿತರರಿದ್ದರು. ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿಲ್ಲಾ ರಕ್ಷಣಾಧಿಕಾರಿ ರವಿ ಡಿ. ಚೆನ್ನಣ್ಣವರ್, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಎಚ್.ಕೆ.ಕೃಷ್ಣಮೂರ್ತಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಬಹುತೇಕ ಎಲ್ಲ ಇಲಾಖೆಯ ಎಲ್ಲ ಹಿರಿಯ-ಕಿರಿಯ ಅಧಿಕಾರಿಗಳು ಸಭೆಯಲ್ಲಿ
ಹಾಜರಾಗಿದ್ದರು.







